ವಿಜಯಪುರ: ಸಿಎಂ ಹುದ್ದೆಗೆ 2,500 ಕೋಟಿ ಹೇಳಿಕೆ ಜನರಲ್ ಆಗಿ ಮಾತನಾಡಿದ್ದೇನೆ ಹೊರತು ಯಾವುದೇ ಪಕ್ಷದ ಬಗ್ಗೆ ಮಾತನಾಡಿಲ್ಲ. ಹೀಗಿದ್ದು ನನ್ನ ವಿರುದ್ಧ ಯಾವ ಶಿಸ್ತುಕ್ರಮ ಕೈಗೊಳ್ಳುತ್ತಾರೆ? ಕಾರಣವಾದರೂ ಏನು? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
2,500 ಕೋಟಿ ಸಜ್ಜು ಮಾಡಿಕೊಳ್ಳಿ ನಿಮ್ಮನ್ನು ಸಿಎಂ ಮಾಡ್ತೇವೆ ಎಂದು ದೆಹಲಿಯಿಂದ ಬಂದ ಕೆಲವರು ನನಗೆ ಹೇಳಿದ್ದರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಯತ್ನಾಳ್, ನಾನು ನೀಡಿದ ಹೇಳಿಕೆ ಯಾವುದೇ ಪಕ್ಷ ಉದ್ದೇಶಿಸಿ ಅಲ್ಲ, ಇನ್ ಜನರಲ್ ಹೇಳಿಕೆ ಎಂದು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರೇ ಹೇಳಿದ್ದಾರೆ. ನಾನು ಹೇಳಿದ್ದು ಇನ್ ಜನರಲ್ ಆಗಿ ಹೊರತು ಯಾವುದೇ ಉದ್ದೇಶದಿಂದ ಅಲ್ಲ. ಹೀಗಿರುವಾಗ ನನ್ನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಕಾರಣವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
ನಾನು ಯಾವುದೇ ಪಾರ್ಟಿ ಬಗ್ಗೆ ಮಾತನಾಡಿಲ್ಲ. ಕ್ರಮ ಕೈಗೊಳ್ಳಲು ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸು ಮಾಡಿದರೆ ಮಾಡಲಿ. ನಾನು ಅಲ್ಲಿಯೇ ಉತ್ತರ ಕೊಡುತ್ತೇನೆ. ಕೆಲ ಮಾಧ್ಯಮದವರು ಯತ್ನಾಳ್ ಹೇಳಿಕೆಗೆ ಯಾವುದೇ ಫಿಲ್ಟರ್ ಇಲ್ಲ. ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಸತ್ಯಕ್ಕೆ ಯಾವುದೇ ಫಿಲ್ಟರ್ ಇಲ್ಲ. ಅದು 24 ಕ್ಯಾರೆಟ್ ಬಂಗಾರ. ಸತ್ಯವನ್ನು ಯಾವತ್ತೂ ಮುಚ್ಚಿಡಲಾಗದು.
ನನ್ನ ವಿರುದ್ಧ ಬಿಜೆಪಿ ಶಿಸ್ತುಕ್ರಮ ಕೈಗೊಂಡು, ಪಕ್ಷದಿಂದ ಹೊರಹಾಕಿ ವಿಜಯೇಂದ್ರಗೆ ಪಟ್ಟ ಕಟ್ಟಬೇಕು ಎಂಬುದು ಕೆಲ ಮಾಧ್ಯಮದವರ ಪ್ರಯತ್ನ. ಹಾಗಾಗಿ ನಾನು ಒಂದು ಹೇಳಿಕೆ ಕೊಟ್ಟರೆ ಅದನ್ನು ಬೇರೊಂದು ಅರ್ಥ ಕಲ್ಪಿಸಿ ಚರ್ಚಿಸುತ್ತಿದ್ದಾರೆ. ಇಂತಹ ವಿಚಾರ ಬಿಟ್ಟು ಮಾಧ್ಯಮದವರು ರಾಜ್ಯದಲ್ಲಿನ ಭ್ರಷ್ಟಾಚಾರ ವಿಚಾರದ ಬಗ್ಗೆ ಮೊದಲು ಚರ್ಚೆ ಮಾಡಲಿ ಎಂದು ಹೇಳಿದರು.