ನವದೆಹಲಿ: ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿರುವ ಕೇಂದ್ರ ಚುನಾವಣಾ ಆಯೋಗ, ಜನವರಿ 15ರವರೆಗೆ ರ್ಯಾಲಿ, ಪಾದಯಾತ್ರೆ, ರಾಜಕೀಯ ಸಭೆ-ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ಕಟ್ಟಪ್ಪಣೆ ಮಾಡಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ ಹಾಗೂ ಮಣಿಪುರ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಿಸಿದರು. ಫೆ.10ರಿಂದ ಮಾರ್ಚ್ 7ರವರೆಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.
ಕೋವಿಡ್, ಒಮಿಕ್ರಾನ್ ಸೋಂಕಿನ ಸಂದರ್ಭದಲ್ಲಿ ಚುನಾವಣೆ ಸವಾಲಾಗಿದ್ದು, ಕೋವಿಡ್ ಮಾರ್ಗಸೂಚಿಗಳ ಅನುಸಾರ ಚುನಾವಣೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಜನವರಿ 15ರವರೆಗೆ ಯಾವುದೇ ಸಾರ್ವಜನಿಕ ರೋಡ್ ಶೋ, ಬೈಕ್ ರ್ಯಾಲಿ, ಸಭೆ-ಸಮಾರಂಭ, ಪಾದಯಾತ್ರೆಗಳಿಗೆ ನಿಷೇಧ ಹೇರಲಾಗಿದೆ. ಜನವರಿ 15ರ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು ಸುವಿಧಾ ಆಪ್ ಮೂಲಕ ಆನ್ ಲೈನ್ ನಲ್ಲಿಯೂ ನಾಮಪತ್ರ ಸಲ್ಲಿಸಬಹುದು. ಆದರೆ ತಮ್ಮ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪ್ರಕಟಿಸಬೇಕು. ಮದ್ಯ, ಹಣ ಹಂಚಿಕೆ, ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಗಾವಹಿಸಲಾಗುವುದು. ಮನೆ ಮನೆ ಪ್ರಚಾರದ ವೇಳೆ ಕೇವಲ 5 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರಚಾರದ ವೇಳೆ ಆಯಾ ರಾಜಕೀಯ ಪಕ್ಷಗಳೇ ಮಾಸ್ಕ್ ಗಳನ್ನು ಒದಗಿಸಬಹುದು. ನಿಯಮ ಉಲ್ಲಂಘಿಸಿದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.