ಮಂಡ್ಯ: ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಂಡ್ಯ ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ರಾಜ್ಯದ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಹುರುಪು ತುಂಬಿದ್ದಾರೆ.
ಪಾದಯಾತ್ರೆಯಲ್ಲಿ 15 ನಿಮಿಷಗಳ ಕಾಲ ನಡೆದ ಸೋನಿಯಾ ಗಾಂಧಿ ಸಾಂಕೇತಿಕವಾಗಿ ಹೆಜ್ಜೆ ಹಾಕಿ ಬಳಿಕ ಪಾದಯಾತ್ರೆ ಮುಗಿಸಿ ಕಾರು ಹತ್ತಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ತಾಯಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ಸಾಕು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಕೆಲ ಕಾಲ ಪಾದಯಾತ್ರೆಯಲ್ಲಿ ಪಾಲ್ಗೊಂಡು ಬಳಿಕ ಕಾರಿನತ್ತ ತೆರಳಿದ್ದಾರೆ.
ಜೆ ಡಿ ಎಸ್ ನ ಭದ್ರ ಕೋಟೆ ಮಂಡ್ಯ, ಮೇಲುಕೋಟೆ ಭಾಗದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ನಡೆಸುತ್ತಿರುವುದು ಹೊಸ ಸಂಚಲನಕ್ಕೆ ಕಾರಣವಾಗಿದೆ.