ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಲೇವಡಿ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನವರಿಗೆ ಧರಣಿ, ಸತ್ಯಾಗ್ರಹ, ಪಾದಯಾತ್ರೆಗಳನ್ನು ಹೀಗೆ ಮುಂದುವರೆಸುವ ಶಕ್ತಿ ಬರಲಿ, ಮುಂದೆಯೂ ವಿಪಕ್ಷ ಸ್ಥಾನದಲ್ಲೆ ಇರಲಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನಾಯಕರಿಗೆ ಇದೇ ರೀತಿ ಧರಣಿ, ಪಾದಯಾತ್ರೆ ನಡೆಸುವ ಶಕ್ತಿ ದೇವರು ಕೊಡಲಿ. ಮೇಕೆದಾಟು ಮಾತ್ರವಲ್ಲ, ಮಹಾದಾಯಿ ಪಾದಯಾತ್ರೆ ಮಾಡುವ ಉದ್ದೇಶವೂ ಕಾಂಗ್ರೆಸ್ ನಾಯಕರಿಗಿದೆ. ಪಾದಯಾತ್ರೆ ಮಾಡಿದರೆ ಸಿಎಂ ಆಗುತ್ತೇನೆ ಎಂಬ ಭ್ರಮೆಯಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಪಾದಯಾತ್ರೆ ಮಾಡಿ ಸಿದ್ದರಾಮಯ್ಯ ಸಿಎಂ ಆಗಿದ್ದರು. ಹಾಗೇ ತಾನೂ ಕೂಡ ಪಾದಯಾತ್ರೆ ಮಾಡಿದರೆ ಸಿಎಂ ಆಗುತ್ತೇನೆ ಎಂದುಕೊಂಡಿದ್ದಾರೆ ಡಿ.ಕೆ.ಶಿವಕುಮಾರ್. ಪಾದಯಾತ್ರೆಯಿಂದ ಡಿಕೆಶಿ ಸಿಎಂ ಆಗಲ್ಲ, ಬೇಕಿದ್ದರೆ ವಿಪಕ್ಷನಾಯಕನಾಗಬಹುದು ಎಂದರು.
ಇದೇ ವೇಳೆ ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ ಎಂಬ ಕಾಂಗ್ರೆಸ್ ಹೇಳಿಕೆಗೂ ತಿರುಗೇಟು ನೀಡಿರುವ ಜೋಶಿ, ಜೆಡಿಎಸ್ ಕಾಂಗ್ರೆಸ್ ಜತೆ ಸರ್ಕಾರ ಮಾಡಿದರೆ ಒರಿಜಿನಲ್ ಪಕ್ಷ, ನಮ್ಮ ಜತೆ ಸರ್ಕಾರ ಮಾಡಿದರೆ ಡುಪ್ಲಿಕೇಟ್ ಪಕ್ಷವೇ? ಎಂದು ಪ್ರಶ್ನಿಸಿದ್ದಾರೆ.