ಬಿಹಾರದಲ್ಲಿ ಶಿಕ್ಷಕ ಆಕಾಂಕ್ಷಿಗಳ ಮೇಲೆ ಪೊಲೀಸರು ಮೃಗಗಳಂತೆ ದಾಳಿ ನಡೆಸಿದ್ದಾರೆ. TET ಪರೀಕ್ಷೆಯ ಬೇಡಿಕೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಪಾಟ್ನಾದಲ್ಲಿ ಪ್ರತಿಭಟನೆಗಿಳಿದಿದ್ದರು. ಇವರನ್ನು ಚದುರಿಸಲು ಎಡಿಎಂ ಕೆ.ಕೆ. ಸಿಂಗ್ ಹಿಂಸಾತ್ಮಕ ಮಾರ್ಗ ಅನುಸರಿಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡುವಂತೆ ಆದೇಶಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ತಾವು ಕೂಡ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಬೆಚ್ಚಿಬೀಳಿಸುವಂತಿದೆ .
ಪೊಲೀಸರು ಅಟ್ಟಾಡಿಸಿ ಅಭ್ಯರ್ಥಿಗಳನ್ನು ಥಳಿಸಿದ್ದಾರೆ. ಲಾಠಿ ಚಾರ್ಜ್ನಲ್ಲಿ ಹಲವರು ಗಾಯಗೊಂಡಿದ್ದಾರೆ. ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಯನ್ನು ಕೈಯಲ್ಲಿದ್ದ ತ್ರಿವರ್ಣ ಧ್ವಜವನ್ನು ಎಳೆದೊಯ್ದು ದೊಣ್ಣೆಯಿಂದ ಥಳಿಸಿದ್ದಾರೆ. ಎಡಿಎಂ ಕೆ.ಕೆ.ಸಿಂಗ್ ಅವರೇ ಮುಂದಾಗಿ ರಸ್ತೆಗೆ ಬಿದ್ದ ವಿದ್ಯಾರ್ಥಿಯ ಮೇಲೆ ಹಲವು ಬಾರಿ ಲಾಠಿ ಪ್ರಹಾರ ನಡೆಸಿದರು. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದ ಈ ಆಡಳಿತ ಅಧಿಕಾರಿಯ ಹಿಂಸಾತ್ಮಕ ವರ್ತನೆಯನ್ನು ನೆಟ್ಟಿಗರು ಟೀಕಿಸಿದ್ದಾರೆ. ಪ್ರತಿಭಟನಾ ನಿರತನನ್ನು ಮನಬಂದಂತೆ ಹಿಂಸಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಿಹಾರದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಡಾಕ್ ಬಂಗಲೆಯಲ್ಲಿ ಈ ಪ್ರತಿಭಟನೆ ನಡೆಸಲಾಯಿತು. ಬಿಹಾರದಾದ್ಯಂತ ಇರುವ ಅಭ್ಯರ್ಥಿಗಳು ಪಾಟ್ನಾ ತಲುಪಿದ್ದು, ಆದಷ್ಟು ಬೇಗ ಬಿಟಿಇಟಿ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಇಲಾಖೆ ಇನ್ನೂ ಪರೀಕ್ಷೆ ನಡೆಸಲು ನಿರಾಕರಿಸುತ್ತಿದ್ದು, ಪೊಲೀಸರು ಅಭ್ಯರ್ಥಿಗಳ ಮೇಲೆ ಬಲಪ್ರಯೋಗ ಮಾಡಿದ್ದಾರೆ.