ಇಂಗ್ಲೆಂಡ್ ಕ್ರಿಕೆಟ್ ಟೀಮ್ ಬಹಳ ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ನಾಳೆಯಿಂದ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆದ್ರೆ ಪಂದ್ಯಕ್ಕೂ ಮೊದಲೇ ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಅನೇಕ ಇಂಗ್ಲೆಂಡ್ ಕ್ರಿಕೆಟಿಗರಿಗೆ ಅಪರಿಚಿತ ವೈರಸ್ ಸೋಂಕು ತಗುಲಿದೆ.
ಇಂಗ್ಲೆಂಡ್ನ ಒಟ್ಟು 14 ಸದಸ್ಯರು ಈ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಜೋ ರೂಟ್, ಝಾಕ್ ಕ್ರಾಲಿ, ಹ್ಯಾರಿ ಬ್ರೂಕ್, ಒಲ್ಲಿ ಪೋಪ್ ಮತ್ತು ಕೀಟನ್ ಜೆನ್ನಿಂಗ್ಸ್ ಕೂಡ ಇದ್ದಾರೆ. ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ನೇತೃತ್ವದಲ್ಲಿ ಇವರೆಲ್ಲ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಗಾಯಗೊಂಡ ಮಾರ್ಕ್ ವುಡ್ ಹೊರತುಪಡಿಸಿ ಉಳಿದವರೆಲ್ಲ ಪ್ರಾಕ್ಟೀಸ್‌ಗೆ ಬಂದಿದ್ದರು.
ಇವರಿಗೆ ತಗುಲಿರುವ ವೈರಸ್‌ನ ಲಕ್ಷಣಗಳು ಕೋವಿಡ್ -19 ಅನ್ನು ಹೋಲುತ್ತಿಲ್ಲ. ಆದರೆ ಇಂಗ್ಲೆಂಡ್ ತಂಡವನ್ನು ಕಾಡುತ್ತಿರುವ ಅನಾರೋಗ್ಯದ ಸ್ವರೂಪ ಸ್ಪಷ್ಟವಾಗಿಲ್ಲ. ಸೋಂಕು ಪೀಡಿತ ಇಂಗ್ಲೆಂಡ್ ಆಟಗಾರರ ನಿಖರ ಸಂಖ್ಯೆ ಕೂಡ ಲಭ್ಯವಾಗಿಲ್ಲ. ಆದರೆ ಅಸ್ವಸ್ಥ ಆಟಗಾರರಿಗೆ ವಿಶ್ರಾಂತಿ ಪಡೆಯಲು ಹೋಟೆಲ್‌ನಲ್ಲಿ ಉಳಿಯಲು ಸೂಚಿಸಲಾಗಿದೆ. ಬೆನ್ ಸ್ಟೋಕ್ಸ್ ಗೂ ಸೋಂಕು ತಗುಲಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಸರಣಿಯ ಟ್ರೋಫಿ ಅನಾವರಣವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದೆ.
ಮೊದಲ ಟೆಸ್ಟ್‌ನ ಟಾಸ್‌ಗೂ ಮುನ್ನ ಈ ಕಾರ್ಯಕ್ರಮ ನಡೆಯಲಿದೆ. ಇಂಗ್ಲೆಂಡ್, ಪಾಕಿಸ್ತಾನ ವಿರುದ್ಧ ಗೆಲ್ಲಲು ಎಲ್ಲಾ ತಯಾರಿ ಮಾಡಿಕೊಂಡಂತಿದೆ. ನಾವು ಡ್ರಾ ಬಯಸುವುದಿಲ್ಲ, ಗೆಲುವೇ ಇಂಗ್ಲೆಂಡ್‌ನ ಗುರಿ ಎಂದು ಅನುಭವಿ ಬೌಲರ್ ಜೇಮ್ಸ್ ಆಂಡರ್ಸನ್ ಹೇಳಿದ್ದಾರೆ. ತವರಿನಲ್ಲಿ ನಡೆದ ಕೊನೆಯ ಏಳು ಪಂದ್ಯಗಳಲ್ಲಿ ಆರು ಮ್ಯಾಚ್‌ಗಳನ್ನು ಇಂಗ್ಲೆಂಡ್ ಗೆದ್ದುಕೊಂಡಿತ್ತು. ಇದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಭದ್ರತೆಯ ಕಾರಣಕ್ಕೆ ಸುಮಾರು 17 ವರ್ಷಗಳಿಂದ ಇಂಗ್ಲೆಂಡ್, ಪಾಕಿಸ್ತಾನ ಪ್ರವಾಸ ಕೈಗೊಂಡಿರಲಿಲ್ಲ.