ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೀಗ ಮತ್ತೊಂದು ದೊಡ್ಡ ತಲೆನೋವು ಶುರುವಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಿಸಿ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರಕ್ಕೆ ಜೋರಾಗಿಯೇ ತಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಪಾಕಿಸ್ತಾನ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಎದುರಿಸುತ್ತಿದೆ.
ಬ್ಯಾಂಕ್ ಗಳಲ್ಲೂ ಸಾಲ ಸಿಗದೇ ತೈಲ ಕಂಪನಿಗಳು ಸಂಕಷ್ಟದಲ್ಲಿವೆ. ಮೂಲಗಳ ಪ್ರಕಾರ ಪಾಕಿಸ್ತಾನದ ಬಳಿ ಇನ್ನು ಕೇವಲ 5 ದಿನಗಳಿಗಾಗುವಷ್ಟು ಡೀಸೆಲ್ ಸಂಗ್ರಹವಿದೆ. ವಿರೋಧ ಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಳ್ಳಬಹುದೆಂಬ ಭಯ ಪ್ರಧಾನಿ ಇಮ್ರಾನ್ ಖಾನ್ ಗೆ ಕಾಡ್ತಾ ಇದೆ. ಇನ್ನೊಂದ್ಕಡೆ ಹಣದುಬ್ಬರ ಮತ್ತಷ್ಟು ಹೆಚ್ಚಾಗುವ ಆತಂಕವೂ ಎದುರಾಗಿದೆ.
ಪಾಕಿಸ್ತಾನದ ಸಾಮಾನ್ಯ ಹಣದುಬ್ಬರವನ್ನು ಗ್ರಾಹಕ ಬೆಲೆ ಸೂಚ್ಯಂಕದಲ್ಲಿ (CPI) ಅಳೆಯಲಾಗುತ್ತದೆ. ಇದು 24 ತಿಂಗಳಲ್ಲಿ ಗರಿಷ್ಠ ಅಂದ್ರೆ ಶೇ.13ರಷ್ಟು ಏರಿಕೆಯಾಗಿದ್ದು, ಬಹುತೇಕ ಎಲ್ಲಾ ಸರಕುಗಳು ದುಬಾರಿಯಾಗಿವೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಇದರಿಂದ ಆಕ್ರೋಶಗೊಂಡಿದ್ದ ಇಮ್ರಾನ್ ಖಾನ್, ಆಲೂಗಡ್ಡೆ, ಟೊಮೆಟೊ ಬೆಲೆಗಳನ್ನು ನಿಯಂತ್ರಿಸಲು ನಾನು ರಾಜಕೀಯಕ್ಕೆ ಬಂದಿಲ್ಲವೆಂದು ವಾಗ್ದಾಳಿ ನಡೆಸಿದ್ದರು. ಇದೀಗ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಜೊತೆ ಜೊತೆಗೆ ಪೆಟ್ರೋಲ್, ಡೀಸೆಲ್ ಕೊರತೆ ನಿಭಾಯಿಸುವುದು ಪಾಕ್ ಪ್ರಧಾನಿಗೆ ಸವಾಲಾಗಿ ಪರಿಣಮಿಸಿದೆ.