ಬೆಳಗಾವಿ: ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆದ ಗೌಪ್ಯ ಸಭೆ ವಿಚಾರವಾಗಿ ಮಾತನಾಡಿದ ಕೆ ಎಂ ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ, 17 ಶಾಸಕರು ಬಿಜೆಪಿಗೆ ಬರದಿದ್ದರೆ ಯಾರೂ ಸಚಿವರಾಗುತ್ತಿರಲಿಲ್ಲ ಎಂಬುದನ್ನು ನಾಯಕರು ನೆನಪಿನಲ್ಲಿಟ್ಟುಕೊಂಡಿರಬೇಕು ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಮಾತನಾಡಿದ ಅವರು, ಸಚಿವ ಉಮೇಶ್ ಕತ್ತಿ ಮಹಾಂತೇಶ್ ಕವಟಗಿಮಠ ಸಭೆ ಕರೆದಿದ್ದರು, ಸಭೆ ನಡೆಸಿದ್ದು ನಾನಲ್ಲ ಎಂದು ಹೇಳಿಕೆ ನೀಡಿದ್ದಾರೆ, ಸಂಸದ ಈರಣ್ಣ ಕಡಾಡಿ, ಪಿ.ರಾಜೀವ್ ಇದು ಬಿಜೆಪಿ ಅಧಿಕೃತ ಸಭೆಯಲ್ಲ ಎಂದು ಹೇಳಿದ್ದರು. ಪಕ್ಷದ ಸಭೆ ಅಂದರೆ ಜಿಲ್ಲಾಧ್ಯಕ್ಷರು ಸೇರಿದಂತೆ ಎಲ್ಲರೂ ಇರಬೇಕು. ಆದರೆ ಸಭೆಗೆ, ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿಗೆ ಆಹ್ವಾನ ಬಂದಿಲ್ಲ. ಸಭೆ ಅಧಿಕೃತವೋ, ಅನಧಿಕೃತವೋ ಎಂಬುದನ್ನು ಪಕ್ಷದ ನಾಯಕರು ಹೇಳಬೇಕು ಎಂದರು.
ಪವರ್ ಎಂಜಾಯ್ ಮಾಡುತ್ತಿರುವವರಿಗೆ ಒಂದು ಮಾತು ಹೇಳುತ್ತೇನೆ. 17 ಜನ ಶಾಸಕರು ಬಿಜೆಪಿಗೆ ಬರದಿದ್ದರೆ ಯಾರೂ ಮಂತ್ರಿಯಾಗ್ತಿರ್ಲಿಲ್ಲ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸೇರಿದಂತೆ ಹಲವರ ತ್ಯಾಗದಿಂದ ಅನೇಕರು ಮಂತ್ರಿಯಾಗಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಚುನಾವಣೆಗೆ ಒಂದು ವರ್ಷ ಬಾಕಿಯಿದೆ. ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಾ ದೂರು ಕೊಡಲು ಸಮಯವಿಲ್ಲ. ಬೆಳಗಾವಿಯಲ್ಲಿ ನಡೆದ ಕೆಲ ಬೆಳವಣಿಗೆ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ತಿಳಿಸಿದರು.