ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅನಾರೋಗ್ಯದ ಕಾರಣಕ್ಕೆ ದುಬೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ವದಂತಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈ ಕುರಿತಂತೆ ಈಗ ಮುಷರಫ್ ಕುಟುಂಬ ಸ್ಪಷ್ಟನೆ ನೀಡಿದ್ದು, ಅವರು ಜೀವಂತವಾಗಿದ್ದಾರೆ. ಸಾವಿನ ವದಂತಿ ಸುಳ್ಳು ಎಂದು ತಿಳಿಸಿದ್ದಾರೆ.
ದುಬೈನ ಅಮೆರಿಕನ್ ಆಸ್ಪತ್ರೆಯಲ್ಲಿ ಮುಷರಫ್ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ. ಆದರೆ ಅವರ ಚೇತರಿಕೆಗಾಗಿ ವೈದ್ಯರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಪರ್ವೇಜ್ ಮುಷರಫ್ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಪಾಕಿಸ್ತಾನದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಚೌಧರಿ, ಇದು ಸುಳ್ಳು ವದಂತಿ ಎಂದು ಹೇಳಿದ್ದರು. ಇದೀಗ ಕುಟುಂಬ ಸದಸ್ಯರಿಂದ ಈ ಕುರಿತ ಸ್ಪಷ್ಟನೆ ಹೊರಬಿದ್ದಿದೆ.