ಕಾರವಾರ: ಹೊನ್ನಾವರ ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಸಿಬಿಐ ಸಲ್ಲಿಸಿದ ವರದಿ ತೃಪ್ತಿಕರವಾಗಿಲ್ಲ ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಮಾತನಾಡಿದ ಕಮಲಾಕರ ಮೇಸ್ತಾ, ಮಗ ಪರೇಶ್ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕ ಸಾವು ಎಂದು ವರದಿ ನೀಡಿದೆ. ಆದರೆ ನನ್ನ ಮಗನದ್ದು ಸಹಜ ಸಾವಲ್ಲ. ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ನಾನು ಈಗಲೂ ಹೇಳುತ್ತೇನೆ. ನನ್ನ ಮಗನದ್ದು ಸಹಜ ಸಾವಲ್ಲ, ಕೊಲೆ. ಹತ್ಯೆ ಬಳಿಕ ಸಾಕ್ಷ್ಯ ನಾಶ ಮಾಡಿದ್ದಾರೆ. ನನಗೆ ಅನ್ಯಾಯವಾಗಿದೆ. ಪೊಲೀಸರು, ಅಂದಿನ ಸರ್ಕಾರ ಸರಿಯಾಗಿ ತನಿಖೆ ಮಾಡಿಲ್ಲ. ನನಗೆ ಸಿಬಿಐ ವರದಿ ಮೇಲೆ ಅನುಮಾನವಿದೆ. ಎನ್ ಐ ಎ ತನಿಖೆಯಿಂದ ಸತ್ಯ ಹೊರಬರಬೇಕು. ಬಿಜೆಪಿ ಸರ್ಕಾರದ ಬಗ್ಗೆಯೂ ನನಗೆ ಅಸಮಾಧಾನವಿದೆ ಎಂದಿದ್ದಾರೆ. ಅಲ್ಲದೇ ಕುಟುಂಬಸ್ಥರು, ಮುಖಂಡರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.