ಬೆಂಗಳೂರು: ಕಾಂಗ್ರೆಸ್ ತೊರೆಯುವುದಾಗಿ ಹೇಳಿಕೆ ನೀಡಿದ್ದ ಸಿ.ಎಂ. ಇಬ್ರಾಹಿಂ ಇದೀಗ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿಯಾದ ಸಿ.ಎಂ. ಇಬ್ರಾಹಿಂ, ರಾಜೀನಾಮೆ ಪತ್ರ ಸಲ್ಲಿಸಿದರು. ಇಬ್ರಾಹಿಂ ರಾಜೀನಾಮೆಯನ್ನು ಸಭಾಪತಿ ಹೊರಟ್ಟಿ ಅಂಗೀಕರಿಸಿದ್ದಾರೆ.
ಪರಿಷತ್ ವಿಪಕ್ಷ ನಾಯಕನ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವುದಾಗಿ ಹೇಳಿದ್ದರು. ಅಲ್ಲದೇ ಜೆಡಿಎಸ್ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಜೆಡಿಎಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ, ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ನನ್ನ ಮೇಲಿನ ಹೊರೆ ಇಳಿಸಿಕೊಂಡಿದ್ದೇನೆ. ಇಲ್ಲಿಂದ ರಾಜಕೀಯದ ಮುಂದಿನ ನಡೆ ಆರಂಭವಾಗಲಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ದೇಶಕ್ಕೆ ಮಾರ್ಗದರ್ಶನ ನೀಡಿದವರು, ಅಜಾತಶತ್ರುಗಳು. ನನ್ನ ಮುಂದಿನ ನಡೆ ದೇವೇಗೌಡರಿಗೆ ಬಿಟ್ಟಿದ್ದೇನೆ ಎಂದು ಹೇಳಿದರು.