ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಅಳೆದು ತೂಗಿ ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಹೆಸರಿಲ್ಲದಿರುವು ಅಚ್ಚರಿಗೆ ಕಾರಣವಾಗಿದೆ.
ಪರಿಷತ್ ಅಭ್ಯರ್ಥಿಗಳಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಹಿಳಾ ಕೋಟಾದಡಿ ಹೇಮಲತಾ ನಾಯಕ್, ದಲಿತ ಕೋಟಾದಲ್ಲಿ ಎಸ್ ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ಒಬಿಸಿ ಕೋಟಾದಡಿ ಕೇಶವ ಪ್ರಸಾದ್ ಅವರಿಗೆ ಪರಿಷತ್ ಟಿಕೆಟ್ ನೀಡಲಾಗಿದೆ.
ಇಂದು ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಕೆಲ ಹೊತ್ತಲೇ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಪರಿಷತ್ ಟಿಕೆಟ್ ಪಡೆದು ಎಂ ಎಲ್ ಸಿಯಾಗಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ ವಿಜಯೇಂದ್ರಗೆ ನಿರಾಸೆಯಾಗಿದೆ. ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂಬ ಪಕ್ಷದ ಸಿದ್ಧಾಂತ ಸಂದೇಶವನ್ನು ಮತ್ತೊಮ್ಮೆ ಬಿಜೆಪಿ ಹೈಕಮಾಂಡ್ ರವಾನಿಸಿದೆ.