ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ನಾಳೆಯೇ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಬಿ.ವೈ. ವಿಜಯೇಂದ್ರಗೆ ಟಿಕೆಟ್ ವಿಚಾರ ಹೈಕಮಾಂಡ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿಗೆ ಅವಕಾಶವಿದೆ. ಇದೀಗ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿ.ವೈ. ವಿಜಯೇಂದ್ರ ಅವರ ಹೆಸರು ಇರಲಿದೆಯೇ ಎಂಬ ಕುತೂಹಲ ಮನೆ ಮಾಡಿದೆ. ಕಾರಣ ವಿಜಯೇಂದ್ರಗೆ ಎಂ ಎಲ್ ಸಿ ಸ್ಥಾನ ನೀಡಿದರೆ ವಿಪಕ್ಷಗಳಿಗೆ ಅಸ್ತ್ರವಾಗುವ ಸಾಧ್ಯತೆ ಇದೆ.
ವಿಜಯೇಂದ್ರಗೆ ಟಿಕೆಟ್ ನೀಡಿದರೆ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿದಂತಾಗುತ್ತದೆ. ಪಕ್ಷದ ಸಿದ್ಧಾಂತಕ್ಕೂ ವಿರುದ್ಧವಾದಂತಾಗುತ್ತದೆ. ಒಂದು ವೇಳೆ ವಿಜಯೇಂದ್ರಗೆ ಟಿಕೆಟ್ ಕೊಡದಿದ್ದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಚುನಾವಣೆ ಹೊತ್ತಲ್ಲಿ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇಕ್ಕಟ್ಟಿಗೆ ಸಿಲುಕಿರುವ ಹೈಕಮಾಂಡ್ ನಾಯಕರು ವಿಜಯೇಂದ್ರಗೆ ಎಂ ಎಲ್ ಸಿ ಸ್ಥಾನ ಕೊಡುತ್ತಾರಾ ? ಎಂಬುದು ಸಧ್ಯದ ಕುತೂಹಲ.
ನಾಳೆಯೇ ಪರಿಷತ್ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿರುವುದರಿಂದ ಇಂದು ಸಂಜೆ ವೇಳೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ.