ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟ್ಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಂತೆ ಹಲವು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಟ್ವಿಟರ್ ತಮ್ಮ ವಶವಾಗುತ್ತಿದ್ದಂತೆ ಭಾರತೀಯ ಮೂಲದ ಸಿಇಓ ಪರಾಗ್ ಅಗರ್ವಾಲ್ ಅವರನ್ನು ಪದಚ್ಯುತಿಗೊಳಿಸಿದ್ದರು.
ಅಲ್ಲದೆ ಟ್ವಿಟರ್ ಖಾತೆ ಬಳಕೆದಾರರು ಬ್ಲೂ ಟಿಕ್ ಮಾನ್ಯತೆ ಪಡೆಯಲು ಶುಲ್ಕ ವಿಧಿಸುವ ಚಿಂತನೆ ನಡೆಯುತ್ತಿದೆ ಎನ್ನಲಾಗಿದ್ದು, ಮೂಲಗಳ ಪ್ರಕಾರ ಬ್ಲೂ ಟಿಕ್ ನೀಡಲು ಮಾಸಿಕ 19.99 ಡಾಲರ್ (ಅಂದಾಜು 1600 ರೂಪಾಯಿ) ಶುಲ್ಕವನ್ನು ವಿಧಿಸಬಹುದು ಎನ್ನಲಾಗಿದೆ.
ಇದರ ಮಧ್ಯೆ ಟ್ವಿಟರ್ ಸಿಇಒ ಆಗಿದ್ದ ಪರಾಗ್ ಅಗರ್ವಾಲ್ ಸ್ಥಾನಕ್ಕೆ ಮತ್ತೊಬ್ಬ ಭಾರತೀಯ ನೇಮಕವಾಗಬಹುದು ಎಂದು ಹೇಳಲಾಗುತ್ತಿದ್ದು, ಚೆನ್ನೈ ಮೂಲದ ಶ್ರೀರಾಮ ಕೃಷ್ಣನ್ ಅವರಿಗೆ ಈ ಪಟ್ಟ ಒಲಿದು ಬರಲಿದೆ ಎನ್ನಲಾಗಿದೆ.