ಬೆಂಗಳೂರು: ಸ್ವಪಕ್ಷದ ಸಚಿವರುಗಳ ವಿರುದ್ಧವೇ ಸಿಡಿದೆದ್ದ ಕಾಂಗ್ರೆಸ್ ಶಾಸಕರು ಪತ್ರ ಬರೆದು ಸಿಎಂ ಸಿದ್ದರಾಮಯ್ಯನವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚಿಸಿದ್ದಾರೆ. ಈ ವೇಳೆ ಶಾಸಕರ ಪತ್ರವನ್ನು ಸಿದ್ದರಾಮಯ್ಯ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ಶಾಸಕರೊಬ್ಬರು ಬರೆದಿದ್ದಾರೆ ಎನ್ನಲಾದ ದೂರಿನ ಪತ್ರ ನೋಡಿ ಸಿದ್ದರಾಮಯ್ಯ ಆಕ್ರೋಶ ಗೊಂಡಿದ್ದಾರೆ. ಅದನ್ನು ಹರಿದು ಹಾಕಿದ್ದಾರೆ.
ಹತ್ತಾರು ವರ್ಷಗಳಿಂದ ಸಾರ್ವಜನಿಕ ಕಷ್ಟ ಕಾರ್ಪಣ್ಯಗಳಿಗೆ ಹೆಗಲಾಗಿ, ರಾಜ್ಯ ಕಾಂಗ್ರೆಸ್ ಕಿಸಾನ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಜನರ ಮನಸ್ಸಿಗೆ ತಲುಪುವಂತೆ ಅವರ ವಿಶ್ವಾಸಕ್ಕೆ ಚ್ಯುತಿಬಾರದಂತೆ ನಡೆದುಕೊಂಡಿದ್ದು, 2023ರ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಸಾರ್ವಜನಿಕರ, ಬೆಂಬಲಿಗರ ಹತ್ತಾರು ಭರವಸೆ, ನಿರೀಕ್ಷೆಗಳನ್ನು ಹೊತ್ತಿದ್ದೇನೆ. ಆದರೆ ನಿರೀಕ್ಷೆಗಳು ಹುಸಿಯಾಗುತ್ತಿವೆ. ಜನರ ಆಶೋತ್ತರಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸಚಿವ ಆಪ್ತಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿ ಅಥವಾ ಒ ಎಸ್ ಡಿ ಅವರ ಅಣತಿಯಂತೆ ಕಾರ್ಯಾದೇಶ ಹೊರಬರುತ್ತಿದೆ. ನಮ್ಮ ಪತ್ರಗಳಿಗೆ ಕನಿಷ್ಟ ಸ್ಪಂದನೆಯ ಉತ್ತರವೂ ಸಿಗುತ್ತಿಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸಲು ನನ್ನನ್ನು ಸರ್ಕಾರದ ಸಚಿವರ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿ ಅಥವಾ ಒಎಸ್ ಡಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲು ಕೋರುತ್ತೇನೆ ಎಂದು ಪತ್ರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಈ ಪತ್ರವನ್ನು ನೋಡಿದ ಸಿಎಂ ಸಿದ್ದರಾಮಯ್ಯ ಅದನ್ನು ಹರಿದು ಹಾಕಿ ಶಾಸಕರ ವಿರುದ್ಧ ಕಿಡಿ ಕಾರಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಶಾಸಕಾಂಗ ಸಭೆಯಲ್ಲಿ ಶಾಸಕರ ಮುನಿಸು ಶಮನಗೊಳಿಸಲು, ಅವರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳು ಯತ್ನಿಸಿದರು ಎನ್ನಲಾಗಿದೆ.