ಬೆಂಗಳೂರು: ಪಠ್ಯ ಪುಸ್ತಕಗಳಿಂದ ಟಿಪ್ಪು ಹೆಸರನ್ನು ಕೈ ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೇಶದ ಇತಿಹಾಸ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ದೇಶದ ಇತಿಹಾಸದ ಜತೆ ಟಿಪ್ಪು ಹೆಸರು ಸೇರಿಕೊಂಡಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಹಿಂದೆ ರಾಷ್ಟ್ರಪತಿಯವರು ಟಿಪ್ಪು ಅವರನ್ನು ಹೊಗಳಿದ್ದರು. ರಾಜ್ಯಪಾಲರು ಟಿಪ್ಪು ಸೇವೆ ಬಗ್ಗೆ ಕೊಂಡಾಡಿದ್ದಾರೆ. ಅಬ್ದುಲ್ ಕಲಾಂ ಕೂಡ ಟಿಪ್ಪು ಬಗ್ಗೆ ಮಾತನಾಡಿದ್ದರು. ಟಿಪ್ಪು ಈ ದೇಶದ ಇತಿಹಾಸದಲ್ಲಿ ಬೆರೆತಿರುವಾಗ ನಾವು ಯಾವುದೇ ಆತುರದ ನಿರ್ಧಾರವನ್ನು ಕೈಗೊಂಡು ಬದಲಿಸಲು ಆಗದು. ದೇಶದ ಇತಿಹಾಸವನ್ನು ಹೊಸದಾಗಿ ಸೇರಿಸಲು, ತಿರುಚಲು ಸಾಧ್ಯವಿಲ್ಲ ಎಂದರು.
ಪಠ್ಯ ಕ್ರಮದಿಂದ ಟಿಪ್ಪು ಹೆಸರು ಕೈಬಿಡುವ ವಿಚಾರವಾಗಿ ಈಗಾಗಲೇ ಸರ್ಕಾರ ಸಮಿತಿ ರಚಿಸಿದೆ. ಸಮಿತಿಯಲ್ಲಿ ತಜ್ಞರಿದ್ದಾರೆ. ಪ್ರಾಜ್ಞರಿದ್ದಾರೆ ಹೀಗಾಗಿ ನಾವು ಈ ವಿಚಾರದ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದರು.
ಇದೇ ವೇಳೆ ಮಾರ್ಚ್ 31ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಶಿವಕುಮಾರ ಸ್ವಾಮೀಜಿ ಜಯಂತಿ ಅಂಗವಾಗಿ ರಾಹುಲ್ ಗಾಂಧಿ ತುಮಕೂರು ಸಿದ್ಧಗಂಗಾ ಮಠಕ್ಕೆ ಆಗಮಿಸಿ, ಶಿವಕುಮಾರಸ್ವಾಮಿಜಿಗಳ ಗದ್ದುಗೆ ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು. ಇನ್ನು ಏಪ್ರಿಲ್ 1ರಂದು ರಾಹುಲ್ ನೇತೃತ್ವದಲ್ಲಿ ಹಿರಿಯ ನಾಯಕರ ಸಭೆ ನಡೆಯಲಿದೆ ಸಭೆ ಬಳಿಕ ಸದಸ್ಯತ್ವ ನೋಂದಣಿ ಅಭಿಯಾನದ ಕುರಿತು ಜೂಮ್ ಮೀಟಿಂಗ್ ನಡೆಯಲಿದೆ ಎಂದು ಹೇಳಿದರು.