ಮೈಸೂರು: ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಕೇಸರಿಕರಣ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ನಮ್ಮ ಕನ್ನಡಕದಲ್ಲಿ ಯಾವುದೇ ಬಣ್ಣ ಕಾಣಿಸುತ್ತಿಲ್ಲ. ನಮಗೆ ಮಕ್ಕಳು ಮಾತ್ರ ಕಾಣಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಕನ್ನಡಕದಲ್ಲಿ ನೋಡಿದರೆ ಕೇಸರಿ ಬಣ್ಣ ಕಾಣಬಹುದು. ನನ್ನ ಕನ್ನಡಕದಲ್ಲಿ ಯಾವುದೇ ಕಮ್ಯುನಿಸ್ಟ್ ಅಥವಾ ಬೇರೆ ಬಣ್ಣ ಕಾಣುವುದಿಲ್ಲ. ನಮಗೆ ಮಕ್ಕಳು ಮಾತ್ರ ಕಾಣುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಜೀವನದುದ್ದಕ್ಕೂ ಕೇವಲ ಬಣ್ಣವೇ ಕಾಣುತ್ತಿರುತ್ತದೆ. ಹಸಿರು ಬಣ್ಣದವರು ಮತ ಹಾಕಲ್ಲ ಎಂಬ ಭಯವಿರಬೇಕು ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕರು ಮಾಡಿರುವ ಟ್ವೀಟ್ ನೋಡಿದರೆ ಅವರಾರೂ ಪಠ್ಯ ಪುಸ್ತಕಗಳನ್ನೇ ಓದಿಲ್ಲ ಅನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ನಾಡಗೀತೆಗೆ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವಮಾನ ಮಾಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ನಾಡಗೀತೆಗೆ ಅವಮಾನ ಮಾಡಿದ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಲಾಗಿದೆ. ಆಗ ಸಿದ್ದರಾಮಯ್ಯನವರೇ ಸಿಎಂ ಆಗಿದ್ದರು. ಒಂದು ವೇಳೆ ರೋಹಿತ್ ತಪ್ಪು ಮಾಡಿದ್ದರು ಎಂದಾದರೆ ಜೈಲಿಗೆ ಕಳುಹಿಸಬೇಕಿತ್ತು. ಆಗ ಹೊರಗೆ ಬಿಟ್ಟು ಈಗ ಆರೋಪ ಮಾಡಲು ಸಿದ್ದರಾಮಯ್ಯನವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.