ಧಾರವಾಡ: ಪಠ್ಯ ಪರಿಷ್ಕರಣೆಯಂತಹ ಜವಾಬ್ದಾರಿ ಸಿಕ್ಕಾಗ ಜಾಗರೂಕತೆಯಿಂದ ಇರಬೇಕು. ತಪ್ಪುಗಳಾಗದಂತೆ ನೋಡಿಕೊಳ್ಳಬೇಕು ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪರೋಕ್ಷವಾಗಿ ರೋಹಿತ್ ಚಕ್ರತೀರ್ಥ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಬಿ.ಸಿ. ನಾಗೇಶ್, ಪಠ್ಯ ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂತದ್ದೊಂದು ಜವಾಬ್ದಾರಿ ಸಿಕ್ಕಾಗ ಜಾಗರೂಕರಾಗಿ ನಡೆದುಕೊಳ್ಳಬೇಕು. ಆದರೆ ತಪ್ಪಾಗಿದ್ದನ್ನು ನಾವು ಗಮನಿಸಿದ್ದೇವೆ. ಮರು ಪರಿಷ್ಕರಣೆಗೆ ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಬಸವಣ್ಣನ ಪಠ್ಯದಲ್ಲಿ ಹಲವು ಹೊಸ ವಿಚಾರವಿರುವ ಬಗ್ಗೆ ಮಾತನಾಡಿದ ಅವರು, ಲೋಪದೋಷಗಳನ್ನು ಯಾರು ತೋರಿಸಿದರೂ ಸರಿ ಮಾಡುತ್ತೇವೆ. ಯಾವ ತಪ್ಪನ್ನು ಮುಚ್ಚಿಡುವ ಪ್ರಶ್ನೆ ಇಲ್ಲ. ಅದನ್ನು ಸರಿಮಾಡುವ ಪ್ರಯತ್ನ ನಡೆದಿದೆ. ವಾದ-ವಿವಾದ ಮಕ್ಕಳ ಮೇಲೆ ಪರಿಣಾಮ ಬೀರಬಾರದು. ಇನ್ನೊಂದು ತಿಂಗಳಲ್ಲಿ ಎಲ್ಲರಿಗೂ ಪುಸ್ತಕ ವಿತರಿಸಲಾಗುವುದು ಎಂದು ಹೇಳಿದರು.
ದೇವನೂರು ಮಹಾದೇವ ಮೊದಲೇ ನಮಗೆ ತಿಳಿಸಬಹುದಿತ್ತು. ಆದರೆ ಪುಸ್ತಕ ಬಿಡುಗಡೆಯಾದ ಮೇಲೆ ಹೇಳಿದ್ದು ನೋವಾಗಿದೆ. ಕುವೆಂಪು ಅವರಿಗೆ ಅವಮಾನವಾದ ವಿಚಾರ ಬರಗೂರು ರಾಮಚಂದ್ರಪ್ಪನವರಿಗೆ ಸೇರುತ್ತದೆ. ಅವರೇ ಅದನ್ನು ಹಾಕಿದ್ದರು. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ನಾಡಗೀತೆಗೆ ಅವಮಾನವಾಗಿದೆ. ಪಠ್ಯ ಪುಸ್ತಕ ಒಬ್ಬರೇ ಮಾಡಲ್ಲ, ಅದನ್ನು ಹಲವರು ಪರಿಷ್ಕರಣೆ ಮಾಡುತ್ತಾರೆ. ತಪ್ಪಾಗಿದೆ ಸರಿಪಡಿಸುತ್ತಿದ್ದೇವೆ ಎಂದರು.