ಬೆಂಗಳೂರು; ಪಠ್ಯ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು ಇದೀಗ ಸರಣಿ ಪ್ರತಿಭಟನೆಗಳಿಗೆ ಮುಂದಾಗಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಿಕ್ಕ ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿ ಹೊಸ ರೂಪ ನೀಡಲು ಹೋಗಿದ್ದಾರೆ. ಹೆಡ್ಗೆವಾರ್ ಸೇರಿಸುವ ಮೂಲಕ ಪಠ್ಯದಲ್ಲಿ ನಾಗ್ಪುರ ಎಜುಕೇಶನ್ ಪಾಲಿಸಿ ತರಲು ರಾಜ್ಯ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಿದ್ದಾರೆ. ಅಂಬೇಡ್ಕರ್ ಬಗ್ಗೆ ಇದ್ದ ಮಾಹಿತಿಯನ್ನು ಮೊಟಕುಗೊಳಿಸಿದ್ದಾರೆ. ಬಸವಣ್ಣ, ಲಿಂಗಾಯಿತ ಧರ್ಮದ ವಿಚಾರವನ್ನೇ ತಿರುಚಿ ಬರೆದಿದ್ದಾರೆ. ಇದಕ್ಕಿಂತ ಅವಮಾನ ಬೇಕಾ? ಸರ್ಕಾರದ ಪಠ್ಯ ಪುಸ್ತಕ ಪರಿಷ್ಕರಣಾ ನೀತಿ ವಿರುದ್ಧ ಜೂನ್ 9ರಿಂದ ಹೋರಾಟ ಆರಂಭಿಸಲಾಗುವುದು. ಅಂದು ಬೆಳಿಗ್ಗೆ 10ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ನ ಎಲ್ಲಾ ಶಾಸಕರು, ಸಂಸದರು, ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರದ ಧೋರಣೆಯನ್ನು ಖಂಡಿಸಿ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.