ಬೆಂಗಳೂರು: ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಕುರಿತ ವಿಚಾರ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಊಹೆ ಮಾಡಿಕೊಂಡು ಬರೆದಿರುವ ಕೆಲ ಅಂಶಗಳನ್ನು ತೆಗೆಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಪ್ಪು ಸುಲ್ತಾನ್ ಬಗ್ಗೆ ಇರುವ ಅಸತ್ಯಗಳನ್ನು ತೆಗೆದು ಸತ್ಯದ ಅಂಶಗಳನ್ನು ಇಡುವಂತೆ ಶಾಸಕ ಅಪ್ಪಚ್ಚು ರಂಜನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ಟಿಪ್ಪು ಬಗ್ಗೆ ಆಧಾರವಿಲ್ಲದ, ದಾಖಲೆಗಳಿಲ್ಲದ ಅಂಶಗಳನ್ನು ತೆಗೆಯುತ್ತೇವೆ. ಪಠ್ಯಪುಸ್ತಕ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಂಡಿದೆ. ಮುಂದಿನ ವಾರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದು ಹೇಳಿದರು.
ಸಮಿತಿ ನೀಡಿದ ವರದಿಯನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗುತ್ತದೆ. ಪಠ್ಯದಿಂದ ಟಿಪ್ಪು ಸುಲ್ತಾನ್ ವಿಚಾರವನ್ನು ನಾವು ಕೈಬಿಡುತ್ತಿಲ್ಲ. ಮಕ್ಕಳಿಗೆ ನಿಜವಾದ ಇತಿಹಾಸ ತಿಳಿಸುವುದು ನಮ್ಮ ಉದ್ದೇಶ. ಪಠ್ಯದಲ್ಲಿ ಸತ್ಯ ಹೇಳದಿದ್ದರೆ ಶಿಕ್ಷಣದ ಮೇಲಿನ ನಂಬಿಕೆ ಹೋಗುತ್ತದೆ. ಟಿಪ್ಪು ಬಿರುದಿಗೆ ದಾಖಲೆ ಇದ್ದರೆ ಅದನ್ನು ಮುಂದುವರೆಸುತ್ತೇವೆ. ಇಲ್ಲವಾದರೆ ಸಮಿತಿ ನೀಡಿದ ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದೇ ವೇಳೆ ಇಂದಿನ ಸ್ಪರ್ಧಾತ್ಮಕ ಜೀವನಕ್ಕೆ ಬೇಕಾದ ಅಂಶ ಮದರಸಾದಲ್ಲಿ ಇಲ್ಲ. ಮದರಸಾಗಳಲ್ಲಿ ಶಿಕ್ಷಣ ಇಲಾಖೆ ನೀಡುತ್ತಿರುವ ಶಿಕ್ಷಣ ಮಕ್ಕಳಿಗೆ ಸಿಗುತ್ತಿಲ್ಲ. ಆ ನಿಟ್ಟಿನಲ್ಲಿ ಮದರಸಾದಲ್ಲಿರುವ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕು ಎಂಬುದು ನಮ್ಮ ಉದ್ದೇಶ. ಆದರೆ ಮದರಸಾ ಸುಪರ್ದಿಗೆ ತೆಗೆದುಕೊಳ್ಳುವ ವಿಚಾರ ಸರ್ಕಾರದ ಮುಂದಿಲ್ಲ. ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ ಎಂದು ಹೇಳಿದರು.