ಕೋಲಾರ: ಕೋಲಾರದಲ್ಲಿ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಸಂಸದ ಕೆ.ಹೆಚ್.ಮುನಿಯಪ್ಪ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಿಂದಲೂ ದೂರ ಉಳಿಯಲು ಮುನಿಯಪ್ಪ ಹಾಗೂ ಬೆಂಬಲಿಗರು ಮುಂದಾಗಿದ್ದಾರೆ. ಈ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ ಎನ್ನಲಾಗುತ್ತಿದೆ.
ಕೋಲಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದು, ಅದ್ದೂರಿ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಗಿದೆ. ಆದರೆ ಕೆ.ಹೆಚ್.ಮುನಿಯಪ್ಪ ಬಣ ಮುಳಬಾಗಿಲು ಪ್ರಜಾಧ್ವನಿ ಸಮಾವೇಶಕ್ಕೆ ಹೋಗದಿರಲು ನಿರ್ಧರಿಸಿದೆ.
ಡಿ.ಕೆ.ಶಿವಕುಮಾರ್ ಬಳಿ ಮುನಿಯಪ್ಪ ಹಾಗೂ ಬೆಂಬಲಿಗರು ಮುಳಬಾಗಿಲು ಸಮಾವೇಶಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್, ಮುನಿಯಪ್ಪ ಅವರನ್ನು ಬಲವಂತವಾಗಿ ಸಮಾವೇಶಕ್ಕೆ ಕರೆದಿದ್ದಾರೆ. ಇನ್ನೊಂದೆಡೆ ಕೆ.ಹೆಚ್.ಮುನಿಯಪ್ಪ ಮನವೊಲಿಸಲು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಪ್ರಯತ್ನಿಸಿದ್ದಾರೆ. ಆದರೆ ಮನವೊಲಿಕೆ ವಿಫಲವಾಗಿದೆ. ಕೋಲಾರದ ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ಪೂಜೆಯಲ್ಲಿ ಮಾತ್ರ ಭಾಗಿಯಾದ ಮುನಿಯಪ್ಪ, ಬಳಿಕ ದೇವಸ್ಥಾನದಿಂದ ತೆರಳಿದ್ದಾರೆ ಎನ್ನಲಾಗಿದೆ.