ಬೆಂಗಳೂರು: ರಾಜ್ಯದ ಅಸಮರ್ಥ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪಕ್ಷಕ್ಕೆ ಹೊರೆಯಾದವರ ಬಗ್ಗೆ ಸಿಎಂ ಬೊಮ್ಮಾಯಿ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ಬಿಜೆಪಿಗೂ ತಮಗೆ ವಹಿಸಿದ ಖಾತೆಗೂ ನ್ಯಾಯ ನೀಡುವ ನಿಟ್ಟಿನಲ್ಲಿ ಪಕ್ಷಕ್ಕೆ ಹೊರೆಯಾದವರ ಬಗ್ಗೆ ಸಿಎಂ ಗಮನ ಹರಿಸಬೇಕು ಎಂದಿದ್ದಾರೆ. ಪಕ್ಷಕ್ಕೆ ಕೊಡುಗೆ ನೀಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಮೂಲಕ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸದ ಸಚಿವರ ವಿರುದ್ಧ ತೀಕ್ಷ್ಣವಾಗಿ ಕಿಡಿಕಾರಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಬಿ ಎಸ್ ವೈ ಪುತ್ರ ವಿಜಯೇಂದ್ರಗೆ ಸ್ಥಾನಮಾನ ವಿಚಾರವಾಗಿ ಮಾತನಾಡಿದ ಸಿ.ಟಿ. ರವಿ ಉಪಾಧ್ಯಕ್ಷ ಹುದ್ದೆ ಸಣ್ಣ ಹುದ್ದೆಯಲ್ಲ, ಅದನ್ನು ಸಣ್ಣ ಹುದ್ದೆ ಎಂದು ಪರಿಗಣಿಸಿದರೆ ನಾನು ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಇಂದು ಹಲವು ಕಾರ್ಯಕರ್ತರು ನನ್ನನ್ನು ಭೇಟಿಯಾಗಿದ್ದರು. ನಿಗಮ ಮಂಡಳಿಗಳಿಗೆ ಈಗಾಗಲೇ ನೇಮಕ ಮಾಡಬೇಕಿತ್ತು. ಆದರೆ ಈವರೆಗೂ ಯಾಕೆ ಮಾಡಿಲ್ಲ ಎಂಬುದು ಗೊತ್ತಿಲ್ಲ, ಹಲವರು ಪರಿಸ್ಥಿತಿ ಲಾಭ ಪಡೆದುಕೊಂಡು ಮಜಾ ಮಾಡುತ್ತಿದ್ದಾರೆ. ಪಕ್ಷಕ್ಕೆ ಕೊಡುಗೆ ನೀಡದವರನ್ನು ಕೈಬಿಡಬೇಕು ಎಂದು ಹೇಳಿದರು.