ಬೆಳಗಾವಿ: ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ನಿನ್ನೆ ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ನಡೆದ ಗೌಪ್ಯ ಸಭೆ ಬಗ್ಗೆ ತಿರುಗೇಟು ನೀಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ಯಾರನ್ನು ಹೊರಗಿಟ್ಟು ಸಭೆ ನಡೆಸುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆದ ಬಿಜೆಪಿ ಸಭೆ ಅಧಿಕೃತ ಸಭೆಯಲ್ಲ, ಹೀಗಾಗಿ ಸಭೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ. ಯಾರನ್ನೂ ಹೊರಗಿಟ್ಟು ಸಭೆ ನಡೆಸಲಾಗಿದೆ ಎಂಬ ವಿಷಯ ಮಾಧ್ಯಮಗಳ ಮೂಲಕ ಗಮನಿಸಿದ್ದೇನೆ. ಉದ್ದೇಶಪೂರ್ವಕವಾಗಿ ಯಾರನ್ನೂ ಹೊರಗಿಟ್ಟು ಸಭೆ ನಡೆಸುವ ಅವಶ್ಯಕತೆ ಇರಲಿಲ್ಲ. ಜಿಲ್ಲೆಯಲ್ಲಿ ಯಾರು ಎಷ್ಟು ಪಕ್ಷಕ್ಕಾಗಿ ದುಡಿಯುತ್ತಾರೆ ಎಂಬುದು ಪಕ್ಷದ ವರಿಷ್ಠರಿಗೆ ಚನ್ನಾಗಿ ಗೊತ್ತಿದೆ. ದಿನಕ್ಕೊಬ್ಬರಂತೆ ಸಭೆ ನಡೆಸುತ್ತಾ ಹೋದರೆ ಅದಕ್ಕೆಲ್ಲ ಉತ್ತರಿಸುವ ಗೋಜಿಗೆ ಹೋಗಲ್ಲ ಎಂದು ಟಾಂಗ್ ನೀಡಿದ್ದಾರೆ.
2008ರಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಬಲವರ್ಧನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಈಗ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳನ್ನು ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ಪ್ರಕಟಿಸಿದ್ದಾರೆ.