ಪಂಜಾಬ್: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದ್ದು, ಆಮ್ ಆದ್ಮಿ ಪಕ್ಷ ಗೆಲುವಿನತ್ತ ದಾಪುಗಾಲಿಟ್ಟಿದೆ. ಆಪ್ ಪಕ್ಷ 89 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.
ಪಂಜಾಬ್ ಸಿಎಂ ಚರಣ ಜಿತ್ ಸಿಂಗ್ ಚೆನ್ನಿ ಸೇರಿದಂತೆ ಸರ್ಕಾರದ 12 ಸಚಿವರುಗಳು ಚುನಾವಣೆಯಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಆಂತರಿಕ ಕಲಹವೇ ಹಿನ್ನಡೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಪಂಜಾಬ್ ಮಾಜಿ ಸಿಎಂ ಕ್ಯಾ.ಅಮರಿಂದರ್ ಸಿಂಗ್ ಪಟಿಯಾಲಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಚಮಕ್ ಪುರ್ ಸಾಹಿಬ್ ಹಾಗೂ ಭಾದೌರ್ ಕ್ಷೇತ್ರಗಳಲ್ಲಿ ಮುಖಭಂಗ ಅನುಭವಿಸಿದ್ದಾರೆ. ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್, ರಾಜಿಂದರ್ ಕೌರ್ ಭಟ್ಟಲ್ ಸಹ ಹಿನ್ನಡೆಯಲ್ಲಿದ್ದಾರೆ.
ಶಿರೋಮಣಿ ಅಕಾಲಿದಳ ಅಧ್ಯಕ್ಷ ಸುಖ್ ಬಿರ್ ಸಿಂಗ್ ಜಲಾಲಾಬಾದ್ ಕ್ಷೇತ್ರದಲ್ಲಿ ತೀವ್ರ ಹಿನ್ನಡೆಯಲ್ಲಿದ್ದಾರೆ. 117 ಸದಸ್ಯ ಬಲದ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ 89 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಆಡಳಿತಾರೂಢ ಕಾಂಗ್ರೆಸ್ 13 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಪಂಜಾಬ್ ನಲ್ಲಿ ಆಪ್ ಸರ್ಕಾರ ರಚನೆ ಖಚಿತವಾಗಿದೆ.