ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಯಾವುದೇ ಒಬ್ಬ ವ್ಯಕ್ತಿ ಹೋರಾಟವಲ್ಲ, ಸಮುದಾಯದ ಹೋರಾಟ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸ್ವಾಮೀಜಿಗಳು, ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಸಿಎಂ ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿಯೇ ಸಭೆ ನಡೆಸಿ ತೀರ್ಮಾನಿಸುವುದಾಗಿ ಹೇಳಿದ್ದಾರೆ.
ಈಗಾಗಲೇ ಶಿಗ್ಗಾಂವಿಯಲ್ಲಿ ಒಂದು ಬಾರಿ ಹೋರಾಟ ನಡೆಸಿದ್ದೇವೆ. ಸಿಎಂ ಬೊಮ್ಮಾಯಿ ಅವರಿಗೆ ಮೀಸಲಾತಿ ನೀಡಬೇಕು ಎಂಬ ಮನಸ್ಸಿದೆ. ಆದರೆ ವಿನಾಕಾರಣ ವಿಳಂಬ ಮಾಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕ್ತಿದ್ದಾರೆ ಅನಿಸುತ್ತಿದೆ. ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ಶಾಸಕ ಯತ್ನಾಳ್ ಹೇಳಿದ್ದಾರೆ. ರಾಜಕೀಯ ಏನೇ ಇರಲಿ ಆದರೆ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡಬಾರದು ಎಂದು ಗುಡುಗಿದರು.
ಇನ್ನು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡದಿದ್ದರೆ ಅದರ ಪರಿಣಾಮದ ಬಗ್ಗೆ ನಾವು ಬಾಯಿಬಿಟ್ಟು ಹೇಳಬೇಕಿಲ್ಲ. ಪರಿಣಾಮದ ಬಗ್ಗೆ ಸರ್ಕಾರಕ್ಕೆ ಗೊತ್ತಿದೆ. ನಮ್ಮ ಸಮಾಜ ನಿರಾಸೆಗೊಳ್ಳುತ್ತಿದೆ ಎಂಬ ಬಗ್ಗೆಯೂ ತಿಳಿದಿದೆ. ಚುನಾವಣೆ ಮೇಲೆ ಪರಿಣಾಮ ಬೀರಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ಮಾಡಬೇಕು ಎಂದು ಎಚ್ಚರಿಸಿದ್ದಾರೆ.