ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಂದರೆ 2D ಅಡಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಶೇ.2ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ.
ಇದರ ಬೆನ್ನಲ್ಲೇ ಪಂಚಮಸಾಲಿ ಸಮುದಾಯದ ಹೋರಾಟವಾವನ್ನು ತಾತ್ಕಾಲಿಕವಾಗಿ ಕೊನೆಗೊಳಿಸುವುದಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಸತ್ಯಾಗ್ರಹ ಅಂತ್ಯಗೊಳಿಸಿದ ಬಳಿಕ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ನಿರಂತರ ಎರಡು ವರ್ಷಗಳಿಂದ ಮನೆ, ಮಠ ತೊರೆದು ಬುತ್ತಿಕಟ್ಟಿಕೊಂಡು ಬಂದು ಮೀಸಲಾತಿಗಾಗಿ ಹೋರಾಟ ನಡೆಸಿದ ಜನರ ಬೆಂಬಲಕ್ಕೆ ಧನ್ಯವಾದ ಹೇಳುತ್ತಾ ಗದ್ಗದಿತರಾಗಿ ಕಣ್ಣೀರಿಟ್ಟರು.
ನಾನು ಯಾವುದೇ ಶ್ರೀಮಂತ ಮಠದ ಸ್ವಾಮೀಜಿಯಲ್ಲ. ಆದರೂ ಕಳೆದ ಎರಡು ವರ್ಷಗಳಿಂದ ನನ್ನೊಂದಿಗೆ ಪಂಚಮಸಾಲಿ ಸಮುದಾಯದ ಜನರು ಪಾದಯಾತ್ರೆ, ಪ್ರತಿಭಟನೆ, ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದ್ದೀರಿ. ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಬೇರೆ ಯಾವ ಸ್ವಾಮೀಜಿಗೂ ಸಿಕ್ಕಿರಲಿಕ್ಕಿಲ್ಲ ಎಂದು ಭಾವುಕರಾದರು.
ನಮ್ಮ ಬೇಡಿಕೆ ಶೇ.15 ರಷ್ಟು ಮೀಸಲಾತಿಯಾಗಿತ್ತು. ಆದರೆ ಕೇವಲ ಶೇ.2ರಷ್ಟು ಮೀಸಲಾತಿ ಹೆಚ್ಚಳ ಮಾಡಿ ಸರ್ಕಾರ ಆದೇಶ ನೀಡಿದೆ. ಅಂದರೆ ಪಂಚಮಸಾಲಿ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ಲಭ್ಯವಾಗಲಿದೆ. ಇದು ನಮ್ಮ ನಿರಂತರ ಹೋರಾಟದ ಪರಿಣಾಮದ ಮೊದಲ ಹೆಜ್ಜೆಗೆ ಸಿಕ್ಕ ಸಣ್ಣ ಯಶಸ್ಸು ಎಂದು ಭಾವಿಸೋಣ. ಚುನಾವಣಾ ಸಂದರ್ಭವಾಗಿರುವುದರಿಂದ ಮುಂದೆ ಮತ್ತೆ ಯಾವ ಸರ್ಕಾರ ಬರಲಿದೆ ಗೊತ್ತಿಲ್ಲ. ಸಧ್ಯಕ್ಕೆ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸೋಣ ಎಂದು ಹೇಳಿದರು.