ಬೆಂಗಳೂರು: ಪಂಚಮಸಾಲಿ 2A ಮಿಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಹೋರಾಟದಲ್ಲಿ ಭಾಗಿಯಾಗಿದ್ದ ಕೆಲ ನಾಯಕರೇ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೆಲ್ಲದ್, ಬಸವಜಯ ಮೃತ್ಯುಂಜಯ ಸ್ವಾಮೀಜಿ ಈ ಬಗ್ಗೆ ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಯಾರು ಧಮ್ಕಿ ಹಾಕಿ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ನಮ್ಮ ಇಡೀ ಸಮುದಾಯಕ್ಕೆ ಗೊತ್ತಿದೆ. ಮತ್ತೆ ಧಮ್ಕಿ ಹಾಕಿದರೆ ಏನು ಮಾಡಬೇಕು ಎಂಬುದೂ ನಮಗೆ ಗೊತ್ತಿದೆ. ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಲ್ಲ. ಇದು ಕಾಂಗ್ರೆಸ್ ನವರು ಮಾಡುತ್ತಿರುವ ಅಪಪ್ರಚಾರ ಎಂದು ಹೇಳಿದರು.
ಹೋರಾಟದಲ್ಲಿ ಭಾಗಿಯಾಗಿದ್ದ ಕೆಲ ರಾಜಕೀಯ ನಾಯಕರೇ ಸ್ವಾಮೀಜಿಯವರಿಗೆ ಕರೆ ಮಾಡಿ ಈ ರೀತಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ವಿಜಯಾನಂದ ಕಾಶಪ್ಪನವರ್ ಹಾಗೂ ವಿನಯ್ ಕುಲ್ಕರ್ಣಿ ವಿರುದ್ಧ ಬೆಲ್ಲದ್ ಗಂಭೀರ ಆರೊಪ ಮಾಡಿದ್ದಾರೆ.