ಬೆಂಗಳೂರು: ಹಿಜಾಬ್ ಪ್ರಕರಣದ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಜಮಾಲ್ ಮಹಮ್ಮದ್ ಉಸ್ಮಾನಿಯ ಎಂದು ಗುರುತಿಸಲಾಗಿದೆ. ನ್ಯಾಯಾಧೀಶರಿಗೆ ಬೆದರಿಕೆ ಪ್ರಕರಣ ಸಂಬಂಧ ಈ ಹಿಂದೆ ಕೋವೈ ರೆಹಮತ್ ಉಲ್ಲಾನನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಬ್ಬರೂ ತಮಿಳುನಾಡಿನ ತೌಹೀದ್ ಜಮಾತ್ ನ ಸದಸ್ಯರು ಎಂದು ತಿಳಿದುಬಂದಿದೆ.
ಹಿಜಾಬ್ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ಮೂವರು ನ್ಯಾಯಾಧೀಶರಿಗೆ ತಮಿಳುನಾಡಿನ ತೌಹೀದ್ ಜಮಾತ್ ಸಂಘಟನೆಯಿಂದ ಬೆದರಿಕೆಯೊಡ್ಡಲಾಗಿದೆ ಎಂದು ಸಂಘಟನೆಯ ರೆಹಮತುಲ್ಲಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಗೆ ಗಿರೀಶ್ ಭಾರದ್ವಾಜ್ ಅರ್ಜಿ ಸಲ್ಲಿಸಿದ್ದರು.