ಬಿಹಾರದಲ್ಲಿ ನಿರ್ಮಾಣ ಹಂತದ ನಾಲ್ಕು ಪಥದ ಸೇತುವೆ ನೋಡನೋಡುತ್ತಿದ್ದಂತೆ ಕುಸಿದು ಬಿದ್ದಿದೆ. ಭಾಗಲ್‌ಪುರದಲ್ಲಿ ಗಂಗಾ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಪಥದ ಸೇತುವೆ ಎರಡನೇ ಬಾರಿಗೆ ಕುಸಿದು ಬಿದ್ದಿದ್ದು ವಿಡಿಯೋ ವೈರಲ್ ಆಗ್ತಿದೆ.
ಸೇತುವೆಯ ಸೂಪರ್ ಸ್ಟ್ರಕ್ಚರ್ ನದಿಗೆ ಬಿದ್ದಿದ್ದು, ಅದನ್ನು ಸ್ಥಳೀಯರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ವರದಿಗಳ ಪ್ರಕಾರ ಖಗಾರಿಯಾ ಮತ್ತು ಭಾಗಲ್ಪುರ ಜಿಲ್ಲೆಗಳನ್ನು ಸಂಪರ್ಕಿಸಲು ನಿರ್ಮಿಸಲಾಗಿದ್ದ ಸೇತುವೆಯ ಸುಮಾರು 100 ಅಡಿ ಉದ್ದದ ಭಾಗ ಎರಡನೇ ಬಾರಿಗೆ ನದಿಗೆ ಕುಸಿದಿದೆ. ಘಟನೆಯಲ್ಲಿ ಸಾವು- ನೋವಿನ ವರದಿಯಾಗಿಲ್ಲ.
ಈ ಸೇತುವೆ ನಿರ್ಮಾಣ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕನಸಿನ ಯೋಜನೆಯಾಗಿದ್ದು, 1750 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಸೇತುವೆಯ ಒಂದು ಭಾಗವು ಕಳೆದ ವರ್ಷ ಏಪ್ರಿಲ್‌ನಲ್ಲಿ ಕುಸಿದಿತ್ತು.