ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ ಆರು ವರ್ಷಗಳ ಬಳಿಕ ಮುಂಬೈ ನಿವಾಸಿಯೊಬ್ಬರಿಗೆ ಸೇರಿದ 1.6 ಲಕ್ಷ ರೂಪಾಯಿ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ಗೆ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠವು ನಿರ್ದೇಶನ ನೀಡಿದೆ.
ಮುಂಬೈನ ಡೊಂಬಿವಿಲಿ ಪ್ರದೇಶದ ನಿವಾಸಿಯಾದ ಕಿಶೋರ್ ಸೊಹೊನಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಹಾಗೂ ಮಾಧವ್ ಜಾಮ್ದಾರ್ ಈ ಆದೇಶವನ್ನು ನೀಡಿದ್ದಾರೆ. 2016ರ ಮಾರ್ಚ್ ತಿಂಗಳಲ್ಲಿ ನಡೆದ ಪ್ರಕರಣವೊಂದರಲ್ಲಿ ಆರೋಪಿಗಳಿಗೆ 1.6 ಲಕ್ಷ ರೂಪಾಯಿಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಠೇವಣಿ ನೀಡುವಂತೆ ಕಲ್ಯಾಣ್ ಮ್ಯಾಜಿಸ್ಟ್ರೇಟ್ ಸೂಚನೆ ನೀಡಿದ್ದರು.
2016ರ ನವೆಂಬರ್ 8ರಂದು ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣವನ್ನು ಘೋಷಣೆ ಮಾಡಿದೆ. ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು 2016ರ ಡಿಸೆಂಬರ್ 31ರವರೆಗೆ ಮಾತ್ರ ಕಾಲಾವಕಾಶ ಇದ್ದಿದ್ದರಿಂದ ಈ ಗಡುವಿನ ಒಳಗಾಗಿ ಹಣವನ್ನು ಸಂಗ್ರಹಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ರನ್ನು ಸೊಹೊನಿ ಮನವಿ ಮಾಡಿದರೂ ಸಹ ಅವರು 2017ರ ಮಾರ್ಚ್ 20ರಂದು ಹಣವನ್ನು ನೀಡಿದ್ದರು.
ಸೊಹೊನಿ ತಮ್ಮ ಅರ್ಜಿಯಲ್ಲಿ ನಮಗೆ ಹಣದ ತುರ್ತು ಅಗತ್ಯವಿಲ್ಲ. ಇದನ್ನು ನಾವು ಉಳಿತಾಯವೆಂದು ಪರಿಗಣಿಸುವುದಾಗಿ ಹೇಳಿದ್ದರು. 2020ರ ಲಾಕ್ಡೌನ್ ಅವಧಿ ಮುಗಿದ ಬಳಿಕ ಅಕ್ಟೋಬರ್ ತಿಂಗಳಲ್ಲಿ ಪೊಲೀಸ್ ಠಾಣೆಗೆ ಹಿಂತಿರುಗಿದಾಗ ಅವರಿಗೆ ಅಮಾನ್ಯೀಕರಣಗೊಂಡ 1000 ರೂಪಾಯಿಯ ನೋಟುಗಳನ್ನು ನೀಡಲಾಯಿತು. ಇದನ್ನು ಸೊಹೊನಿ ಗಾಂಧಿಜಿಯ ಫೋಟೋ ಇರುವ ಕಾಗದದ ತುಂಡು ಎಂದು ವ್ಯಂಗ್ಯವಾಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಬಳಿ ಇರುವ ನೋಟು ಸುರಕ್ಷಿತವಾಗಿದೆ ಎಂದು ನಾನು ಭಾವಿಸಿದ್ದೆ ಎಂದು ಸೊಹೊನಿ ಹೇಳಿದ್ದಾರೆ. ಆರ್ಬಿಐ ಪರ ವಕೀಲರಾದ ಅದಿತಿ ಫಾಟಕ್ ಹಣಕಾಸು ಸಚಿವಾಲಯದ 2017ರ ಮೇ 12ನೆ ತಾರೀಖಿನ ಅಧಿಸೂಚನೆಯನ್ನು ಉಲ್ಲೇಖಿಸಿ ಮುಟ್ಟುಗೋಲು ಹಾಕಲಾದ ನೋಟುಗಳನ್ನು ನ್ಯಾಯಾಲಯವು ಬ್ಯಾಂಕ್ಗೆ ಹಿಂದಿರುಗಿಸಿದರೆ ಆಗ ಹಣ ವಿನಿಮಯ ಮಾಡಿಕೊಳ್ಳಬಹುದು ಎಂದಿದ್ದಾರೆ.
ವಾದ – ವಿವಾದಗಳನ್ನು ಆಲಿಸಿದ ಕೋರ್ಟ್, ಅರ್ಜಿದಾರರ ಹಣವನ್ನು ಪ್ರಸ್ತುತ ಮಾನ್ಯವಾಗಿರುವ ನೋಟುಗಳ ಜೊತೆಯಲ್ಲಿ ಆರ್ಬಿಐ ವಿನಿಮಯ ಮಾಡಿಕೊಡುವಂತೆ ಸೂಚನೆ ನೀಡಿದೆ.