ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪರ ಮಾತನಾಡಿದ್ದಕ್ಕೆ ನನಗೆ ನೋಟೀಸ್ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷದ ನಾಯಕರ ವಿರುದ್ಧ ಮತ್ತೆ ಗರಂ ಆಗಿದ್ದಾರೆ.
ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪ ಪರ ಮಾತನಾಡಿದ್ದಕ್ಕೆ ನನಗೆ ನೋಟಿಸ್ ಕೊಟ್ರು. ಮಾಜಿ ಸಿಎಂ ಬಿ ಎಸ್ ವೈ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಯಡಿಯೂರಪ್ಪನವರಿಗೆ ಅಪಮಾನ ಮಾಡಿದ್ದಕ್ಕೆ ನಾನು ಮಾತನಾಡಿದೆ. ನಾನು ಪ್ರಧಾನಿ ಮೋದಿ, ಯಡಿಯೂರಪ್ಪ ವಿರುದ್ಧ ಮಾತನಾಡುವುದಿಲ್ಲ. ಪಕ್ಷದ ನೋಟಿಸ್ ಗೆ ನಾನು ಹೆದರಲ್ಲ, ನೋಟೀಸ್ ಕೊಟ್ಟ ಮೇಲೆಯೇ ಶಿಸ್ತು ಸಮಿತಿ ಇದೆ ಎಂದು ಗೊತ್ತಾಗಿದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಸ್ಥಿತಿಗತಿ ಬಗ್ಗೆ ಅಮಿತ್ ಶಾ, ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ನಡ್ಡಾ ಅವರನ್ನು ಭೇಟಿಯಾಗಿ ಪಕ್ಷದ ಸೋಲಿಗೆ ಕಾರಣ ತಿಳಿಸುತ್ತೇನೆ. ಪಕ್ಷದ ಸೋಲಿಗೆ ಯಾರ್ಯಾರು ಕಾರಣ ಎಂದು ವರಿಷ್ಠರಿಗೆ ತಿಳಿಸುತ್ತೇನೆ. ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಹೇಳಿದರು.
2019ರಲ್ಲಿ ಬಿ ಎಸ್ ವೈ ಗಾಗಿ ಕಾಂಗ್ರೆಸ್, ಜೆಡಿಎಸ್ ನಿಂದ ಶಾಸಕರು ಬಂದರು. ಬಿ ಎಸ್ ವೈಗಾಗಿ ಬಿಜೆಪಿಗೆ ಬಂದವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿದರು. ಸರ್ಕಾರ ನಡೆಸುವುದರ ಜೊತೆಗೆ ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದು ಬಿ ಎಸ್ ವೈ. ಅಂತಹ ಬಿ ಎಸ್ ವೈ ವಿರುದ್ಧ ಮಾತನಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಯಡಿಯೂರಪ್ಪನವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದವರಿಗೆ ರಾಜಮರ್ಯಾದೆ. ಬಿಜೆಪಿಗೆ ಆದಂತಹ ಸ್ಥಿತಿ ಬಗ್ಗೆ ಮಾತನಾಡಿದ್ದಕ್ಕೆ ನನಗೊಬ್ಬನಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.