ಜುಲೈ 1 ರಿಂದ ಜಾರಿಗೆ ಬರುವಂತೆ ಬೆಂಗಳೂರಿನ ನೈಸ್ ರಸ್ತೆಯ ಟೋಲ್ ಶುಲ್ಕ ಹೆಚ್ಚಳವಾಗಿದೆ. ವಾಹನ ಸವಾರರ ಗಾಯದ ಮೇಲೆ ಬರೆ ಎಳೆದಂತೆ ಈಗ ಬೆಂಗಳೂರು – ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕದಲ್ಲೂ ಸಹ ಹೆಚ್ಚಳ ಮಾಡಲಾಗಿದ್ದು, ಇದು ಕೂಡ ಶುಕ್ರವಾರದಂದಲೇ ಜಾರಿಗೆ ಬಂದಿದೆ.
19 ಕಿಲೋಮೀಟರ್ ವ್ಯಾಪ್ತಿಯ ಈ ಟೋಲ್ ಶುಲ್ಕವನ್ನು 5 ರೂ. ಗಳಿಂದ 20 ರೂ. ವರೆಗೆ ಹೆಚ್ಚಳ ಮಾಡಲಾಗಿದ್ದು, ಲಘು ಮೋಟಾರ್ ವಾಹನಗಳ (ಕಾರು, ಜೀಪ್ ಇತ್ಯಾದಿ) ಒಂದು ಬಾರಿಯ ಸಂಚಾರದ ಟೋಲ್ ಶುಲ್ಕ 25 ರೂ.ಗಳಿಂದ 30 ರೂಪಾಯಿಗಳಿಗೆ ಏರಿಕೆಯಾಗಿದ್ದರೆ, ದೈನಂದಿನ ಪಾಸ್ ದರ 35 ರೂಪಾಯಿಗಳಿಂದ 40 ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ನು ಮಾಸಿಕ ಪಾಸ್ ದರ 725 ರೂಪಾಯಿಗಳಿಂದ 830 ರೂಪಾಯಿಗಳಿಗೆ ಏರಿಕೆಯಾಗಿದೆ.
ಲಘು ವಾಣಿಜ್ಯ ವಾಹನ ಮತ್ತು ಮಿನಿ ಬಸ್ ದರಗಳೂ ಸಹ ಏರಿಕೆಯಾಗಿದ್ದು, ಒಂದು ಬಾರಿಯ ಸಂಚಾರಕ್ಕಾಗಿ 45 ರೂ., ದೈನಂದಿನ ಪಾಸ್ 70 ರೂ. ಹಾಗೂ ಮಾಸಿಕ ಪಾಸ್ ದರವನ್ನು 1,210 ರೂ. ಗಳಿಂದ 1,385 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಬಸ್ ಹಾಗೂ ಟ್ರಕ್ ಗಳ ಟೋಲ್ ಶುಲ್ಕವನ್ನು 10ರಿಂದ 15 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದ್ದು, ಒಂದು ಬದಿಯ ಸಂಚಾರಕ್ಕಾಗಿ 95 ರೂಪಾಯಿ ಹಾಗೂ ಡೈಲಿ ಪಾಸ್ 140 ರೂಪಾಯಿ ನಿಗದಿಪಡಿಸಲಾಗಿದೆ. ಮಾಸಿಕ ಪಾಸ್ ದರ 2,845 ರೂಪಾಯಿಗಳಾಗಿದೆ.