ಮಂಗಳೂರು: ನೈತಿಕ ಪೊಲಿಸ್ ಗಿರಿ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಆಂಟಿ ಕಮ್ಯೂನಲ್ ವಿಂಗ್ ಸ್ಥಾಪನೆ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಗೃಹ ಸಚಿವರು, ನೈತಿಕ ಪೊಲೀಸ್ ಗಿರಿ ತಡೆಗೆ ಆಂಟಿ ಕಮ್ಯೂನಲ್ ವಿಂಗ್ ರಚಿಸಲಾಗುವುದು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸ ಘಟಕ ಸ್ಥಾಪನೆಯಾಗಲಿದೆ. ಆಂಟಿ ಕಮ್ಯೂನಲ್ ವಿಂಗ್ ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ಭಯದ ವಾತಾವರಣವಿದೆ ಎಂಬ ಮಾತು ಕೇಳಿಬರುತ್ತಿದೆ. ಇಲ್ಲಿ ಒಳ್ಳೆಯ ಜನರೂ ಇದ್ದಾರೆ ಎಂದು ನಂಬಿದ್ದೇವೆ. ಕೋಮು ಸೌಹಾರ್ದತೆ ತರಲು ಪೊಲೀಸರಿಗೆ ಸೂಚಿಸಿದ್ದೇವೆ. ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚುತ್ತಿದೆ. ಹಾಗಾಗಿ ಇಂತಹ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಆಗಸ್ಟ್ 15ರೊಳಗೆ ಕರಾವಳಿ ಭಾಗ ಡ್ರಗ್ಸ್ ಮುಕ್ತ ಪ್ರದೇಶವಾಗಬೇಕು. ಕೋಮುದ್ವೇಷಕ್ಕೆ ಬಲಿಯಾದ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುವುದು. ದೀಪಕ್ ರಾವ್, ಪಾಝಿಲ್, ಜಲೀಲ್, ಮಸೂದ್ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.