ಬೆಂಗಳೂರು: ನಾಳೆಯಿಂದ ವೀಕೆಂಡ್ ಕರ್ಫ್ಯೂ ಇರುವುದಿಲ್ಲ. ಒಂದು ವೇಳೆ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಮತ್ತೆ ಕರ್ಫ್ಯೂ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ವೀಕೆಡ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ. ರಾತ್ರಿ 10 ಗಂಟೆಯಿಂದ 5 ಗಂಟೆಯವರೆಗೆ ಎಂದಿನಂತೆ ನೈಟ್ ಕರ್ಫ್ಯೂ ಮಾತ್ರ ಮುಂದುವರೆಯಲಿದೆ. ಸದ್ಯಕ್ಕೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ.5ರಷ್ಟಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಮತ್ತೆ ಕಠಿಣ ನಿಯಮಗಳು ಜಾರಿಯಾಗಲಿವೆ. ತಜ್ಞರ ಸಲಹೆ ಮೇರೆಗೆ ವಿಕೆಂಡ್ ಕರ್ಫ್ಯೂ ರದ್ದು ಮಾಡಲಾಗಿದೆ ಎಂದರು.
ಹೋಟೆಲ್, ಬಾರ್, ಕ್ಲಬ್ ಗಳಲ್ಲಿ 50:50 ನಿಯಮ ಎಂದಿನಂತೆಯೇ ಮುಂದುವರೆಯಲಿದೆ. ಪ್ರತಿಭಟನೆ, ಸಭೆ, ಸಮಾರಂಭ ಸೇರಿದಂತೆ ಯಥಾವತ್ತು ನಿಯಮ ಮುಂದುವರೆಯಲಿವೆ. ಜನರು ಸ್ವತಃ ಜಾಗೃತರಾಗಿ ಮಾಸ್ಕ್, ದೈಹಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಹೇಳಿದರು.