ಬೆಂಗಳೂರು: ರಾಜ್ಯಾದ್ಯಂತ ಜಾರಿಯಾಗಲಿರುವ ನೈಟ್ ಕರ್ಫ್ಯೂ ಬಗ್ಗೆ ಪುನರ್ ಪರಿಶೀಲನೆ ಅಗತ್ಯವಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಒಮಿಕ್ರಾನ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಡಿಸೆಂಬರ್ 28ರಿಂದ ನೈಟ್ ಕರ್ಫ್ಯೂ ಜಾರಿಗೊಳ್ಳಲಿದ್ದು, ಹೋಟೆಲ್, ಬಾರ್, ಪಬ್ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನೈಟ್ ಕರ್ಫ್ಯೂ ನಿಯಮ ಸಡಿಲಿಸಬೇಕು. ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ನೈಟ್ ಕರ್ಫ್ಯೂ ಆದೇಶ ಪುನರ್ ಪರಿಶೀಲನೆ ಇಲ್ಲ. ಅಕ್ಕಪಕ್ಕದ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ಹಾಗೂ ಒಮಿಕ್ರಾನ್ ಹೆಚ್ಚಳ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಉದ್ಯಮಿಗಳಿಗೆ ನಷ್ಟವಾಗಲಿದೆ ಎಂಬ ಅರಿವಿದೆ. ಆದರೆ ಜನರ ಆರೋಗ್ಯದ ಹಿತದೃಷ್ಟಿಯಿಂದ ಕರ್ಫ್ಯೂ ಜಾರಿ ಮಾಡಲಾಗಿದ್ದು, ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಒಮಿಕ್ರಾನ್ ಕೇಸ್ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದರೆ ದೇಶಾದ್ಯಂತ ಒಮಿಕ್ರಾನ್ ಬಗ್ಗೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಯುರೋಪ್ ದೇಶಗಳಲ್ಲಿ ಒಮಿಕ್ರಾನ್ ಹೆಚ್ಚುತ್ತಿದೆ. ಹಾಗಾಗಿ ಅದೇ ಆಧಾರದಲ್ಲಿ ತಜ್ಞರು ನೀಡಿರುವ ಸಲಹೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದರು.