ಬಳ್ಳಾರಿ: ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿಗೆ ಬರುತ್ತಿದ್ದು, ಒಂದು ವೇಳೆ ಕರ್ಫ್ಯೂ ಉಲ್ಲಂಘಿಸಿದರೆ ಎಫ್ ಐ ಆರ್ ದಾಖಲಿಸುವುದಾಗಿ ಬಳ್ಳಾರಿ ಜಿಲ್ಲಾ ಎಸ್ ಪಿ ಸೈದುಲ್ ಅದಾವತ್ ಎಚ್ಚರಿಕೆ ನೀಡಿದ್ದಾರೆ.
ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಟ ನಡೆಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ 7 ಕಡೆ ಚೆಕ್ ಪೋಸ್ಟ್ ಹಾಕಲಾಗಿದೆ. ಗೂಡ್ಸ್, ಜಿಲ್ಲಾ ಬಸ್ ಗಳಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ ತುರ್ತು ಸಂದರ್ಭ ಹೊರತುಪಡಿಸಿ ಜನರ ಓಡಾಟಕ್ಕೆ ಅವಕಾಶವಿಲ್ಲ. ಅನಗತ್ಯ ಓಡಾಟ ನಡೆಸಿದರೆ ಅಂತವರ ವಿರುದ್ಧ ಎಫ್ ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಖಾಸಗಿ ವಾಹನಗಳು ಹೊರ ಬಂದರೆ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು. ಗುಂಪು ಸೇರುವಿಕೆಗೆ ಅವಕಾಶವಿಲ್ಲ. ಸಾರ್ವಜನಿಕವಾಗಿ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.