ಬೆಂಗಳೂರು: ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಿದ್ದು ರಾಜಕೀಯ ಕಾರಣಕ್ಕೆ. 5 ವರ್ಷ ಕಾಂಗ್ರೆಸ್ ಆಡಳಿತವಿದ್ದಾಗ ನೀರಿಗಾಗಿ ಹೋರಾಟ ಮಾಡದೇ ಯಾಕೆ ಸುಮ್ಮನಿದ್ದರು? ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನೆಲಮಂಗಲದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ನೀರಿಗಾಗಿ ನಡೆಸಿದ ಹೋರಾಟ ಕೇವಲ ರಾಜಕೀಯ ಗಿಮಿಕ್. ಅರ್ಕಾವತಿ ಪುನಶ್ಚೇತನ ಮಾಡುವುದಾಗಿ ಹೇಳಿದರು ಆದರೆ ಏನಾಯಿತು? ಏನೂ ಮಾಡದೇ ಸುಮ್ಮನಾದರು. ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಎಂದು ನಾಟಕವಾಡಿದರು. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಸ್ವತಂತ್ರ ಸರ್ಕಾರವಿರಲಿಲ್ಲ. ಆದರೆ ಬಿಜೆಪಿ, ಕಾಂಗ್ರೆಸ್ ಸ್ವತಂತ್ರವಾಗಿ ಆಡಳಿತ ನಡೆಸಿದರೂ ಯಾಕೆ ನೀರಾವರಿ ಯೋಜನೆ ಜಾರಿಗೊಳಿಸದೇ ಕೈಕಟ್ಟಿ ಕುಳಿತಿದ್ದರು? ಎಂದು ಪ್ರಶ್ನಿಸಿದರು.
ಜೆಡಿಎಸ್ ತೊರೆದು ಹಲವರು ಬೇರೆ ಪಕ್ಷದತ್ತ ಮುಖ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೆಲವರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಪಕ್ಷಕ್ಕೆ ಡ್ಯಾಮೇಜ್ ಮಾಡಿ ಹೋಗುವವರೇ ನಂತರ ಬೀದಿಪಾಲಾಗುತ್ತಾರೆ. ಜೆಡಿಎಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಯಾರೇ ಹೋದರೂ ಪಕ್ಷವೇ ನಾಯಕತ್ವ ಹುಟ್ಟುಹಾಕುತ್ತೆ. ಜೆಡಿಎಸ್ ಬಗ್ಗೆ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ನಾಯಕರು ಲಘುವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಸಮಾವೇಶದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ ಎಂದರು.
ಮೇ 13ರಂದು ನೆಲಮಂಗಲದಲ್ಲಿ ಜಲಧಾರೆ ಸಮಾವೇಶ ನಡೆಯಲಿದೆ. ಮಧ್ಯಾಹ್ನ 3-6ವರೆಗೆ ಸಮಾವೇಶ ನಡೆಯಲಿದ್ದು, ನೆಲಮಂಗಲದ ಮೂಲಕವೇ ಚುನಾವಣಾ ಪ್ರಚಾರ ಆರಂಭವಾಗಲಿದೆ ಎಂದು ಹೇಳಿದರು.