ಗುಜರಾತಿನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದ ಪರಿಣಾಮ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಶತಮಾನಗಳಷ್ಟು ಹಳೆಯದಾದ ಈ ಸೇತುವೆಯನ್ನು ಏಳು ತಿಂಗಳ ಹಿಂದೆ ದುರಸ್ತಿಗಾಗಿ ಬಂದ್ ಮಾಡಲಾಗಿದ್ದು, ಸಾರ್ವಜನಿಕರಿಗೆ ತೆರೆದುಕೊಂಡ 5 ದಿನಗಳ ಬಳಿಕ ಘೋರ ದುರಂತ ನಡೆದು ಹೋಗಿದೆ.
ನವೀಕರಣದ ಗುತ್ತಿಗೆ ಪಡೆದುಕೊಂಡ ಕಂಪನಿ, ಆ ಬಳಿಕ ಸ್ಥಳೀಯಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ಹಾಗೂ ಸುರಕ್ಷತಾ ಪ್ರಮಾಣ ಪತ್ರ ತೆಗೆದುಕೊಳ್ಳದೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿರುವುದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಇದರ ಮಧ್ಯೆ ದುರಂತ ನಡೆದ ದಿನದಂದು ಅಲ್ಲಿದ್ದ ಪ್ರತ್ಯಕ್ಷದರ್ಶಿ ಅಶ್ವಿನ್ ಮೆಹ್ರಾ ಎಂಬವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸೇತುವೆ ಕುಸಿದು ಬೀಳುವ ಮುನ್ನ 15 ರಿಂದ 20 ಯುವಕರು ಸೇತುವೆ ಮೇಲಿದ್ದ ಲೋಹದ ಹಗ್ಗವನ್ನು ಎಳೆಯುತ್ತಿದ್ದಲ್ಲದೆ ಒದೆಯುತ್ತಿದ್ದರು ಎಂದು ಹೇಳಿದ್ದಾರೆ.
ಇದಾದ ಬಳಿಕವೇ ಸೇತುವೆ ಕುಸಿದು ಬಿತ್ತು ಎಂದು ಅವರು ಹೇಳಿದ್ದು, ಆದರೆ ಕೇವಲ ಒದೆಯುವ ಮೂಲಕವೇ ಸೇತುವೆ ಕುಸಿದು ಬಿದ್ದಿದೆ ಎಂದರೆ ಅದೆಷ್ಟರ ಮಟ್ಟಿಗೆ ಸುರಕ್ಷಿತವಾಗಿತ್ತು ಎಂಬ ಪ್ರಶ್ನೆ ನೆಟ್ಟಿಗರಿಂದ ಕೇಳಿ ಬರುತ್ತಿದೆ.