ಬೆಂಗಳೂರು: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ರಾಜ್ಯದಲ್ಲಿಯೂ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಬೆಂಗಳೂರು ನಗರಾದ್ಯಂತ ಪೊಲೀಸರು ರಾತ್ರಿ – ಹಗಲು ರೌಂಡ್ಸ್ ಹಾಕುತ್ತಿದ್ದು, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ವಿಭಾಗ ಹಾಗೂ ಆಗ್ನೇಯ, ಈಶಾನ್ಯ, ವೈಟ್ ಫೀಲ್ಡ್ ವಿಭಾಗಗಳಲ್ಲಿ ಮುನ್ನೆಚ್ಚರಿಕೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶ, ಮಸೀದಿಗಳ ಬಳಿ ತೀವ್ರ ನಿಗಾ ವಹಿಸಲಾಗಿದೆ.
ರಾಜ್ಯದಲ್ಲಿ ಕಟ್ಟೆಚ್ಚರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಬೊಮ್ಮಾಯಿ, ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದ್ದು, ಕಟ್ಟೆಚ್ಚರಕ್ಕೆ ಹಾಗೂ ಗಸ್ತು ಆರಂಭಿಸುವಂತೆ ಸೂಚಿಸಲಾಗಿದೆ. ಸರ್ಕಾರದಿಂದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಪ್ರಸ್ತುತ ಶಾಂತಿ ವಾತಾವರಣವಿದೆ ಎಂದು ಹೇಳಿದರು.