ಬಿಜೆಪಿಯ ಮಾಜಿ ಮುಖಂಡರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ವಿರುದ್ಧ ಪ್ರತಿಭಟನೆ ನಡೆಸಿದ ಅನಿವಾಸಿಗಳನ್ನು ಕುವೈತ್ ಸರ್ಕಾರ ಗಡೀಪಾರು ಮಾಡಿದೆ.
ಯಾವುದೇ ವಲಸಿಗರು ಪ್ರತಿಭಟನೆ ನಡೆಸುವುದನ್ನು ಕುವೈತ್ ಸರ್ಕಾರ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ವಲಸಿಗರನ್ನು ತಮ್ಮ ದೇಶಗಳಿಗೆ ವಾಪಸ್ ಕಳಿಸಲು ಆದೇಶ ನೀಡಿದೆ.
ಕುವೈತ್ ನಲ್ಲಿ ನೆಲೆಸಿರುವ ಎಲ್ಲಾ ವಲಸಿಗರು ಈ ನೆಲದ ಕಾನೂನನ್ನು ಗೌರವಿಸಬೇಕು ಮತ್ತು ಯಾವುದೇ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ಸರ್ಕಾರ ಹೇಳಿದೆ.
ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್ ಬಗ್ಗೆ ನೀಡಿದ್ದ ಹೇಳಿಕೆಗಳ ವಿರುದ್ಧ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅದೇ ರೀತಿ ಕುವೈತ್ ನಲ್ಲಿ ಭಾರತೀಯರು ಸೇರಿದಂತೆ ಇನ್ನಿತರೆ ದೇಶಗಳ ವಲಸಿಗ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು.
ಕಾನೂನನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿರುವುದರಿಂದ ಎಲ್ಲರನ್ನೂ ದೇಶದಿಂದ ಹೊರ ಹಾಕುವ ನಿರ್ಧಾರಕ್ಕೆ ಬರಲಾಗಿದ್ದು, ಇವರೆಲ್ಲರ ವೀಸಾವನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.