ರಾಮನಗರ: ರಾಮನಗರ ಜಿಲ್ಲೆಯ ಹಾರೋಹಳ್ಳಿ ನೂತನ ತಾಲೂಕು ಕೇಂದ್ರ ಉದ್ಘಾಟನಾ ಕಾರ್ಯಕ್ರಮದ ವೇದಿಕೆ ಮೇಲೆಯೇ ಸಚಿವ ಅಶ್ವತ್ಥನಾರಾಯಣ ಹಾಗೂ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ನಡುವೆ ವಾಕ್ಸಮರ ನಡೆದ ಘಟನೆ ನಡೆದಿದೆ.
ವೇದಿಕೆಯಲ್ಲಿ ಸಚಿವ ಅಶ್ವತ್ಥನಾರಾಯಣ, ಹಾರೋಹಳ್ಳಿ ತಾಲೂಕು ರಚನೆಗೆ ಸರ್ಕಾರ ಸಾಕಷ್ಟು ಶ್ರಮಿಸಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಲೂಕು ರಚನೆಗೆ ಕೇವಲ ತಾತ್ವಿಕ ಅನುಮೋದನೆ ಕೊಟ್ಟಿದ್ದರು. ಆದರೆ ಅಂತಿಮ ಅನುಮೋದನೆಯಾಗಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ. ಬಿಜೆಪಿ ಸರ್ಕಾರ ರಾಮನಗರ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡಿದೆ ಎಂದು ಹೇಳಿದರು. ಸಚಿವರ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ, ಹಾರೋಹಳ್ಳಿ ತಾಲೂಕು ರಚನೆಗೆ ಶ್ರಮಿಸಿದ್ದು ನಾನು ಎಂದು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆದ ಮೇಲೆ ರಾಮನಗರ ಜಿಲ್ಲೆ ಅಭಿವೃದ್ಧಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ತಾಲುಕು ರಚನೆಗೆ ಶ್ರಮ ವಹಿಸಿದ್ದು ನಾನು, ಕುಮಾರಸ್ವಾಮಿ ಶಾಸಕರಾದ ಮೇಲೆ ಅಭಿವೃದ್ಧಿ ಕೆಲಸಗಳಾದವು. ರಾಮನಗರಕ್ಕೆ 450 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಕೊಟ್ಟಿದ್ದೇವೆ ಎಂದು ಸಚಿವರು ಹೇಳಿದರು. ಆದರೆ ಇದು ಬಿಜೆಪಿ ಸರ್ಕಾರ ಬರುವ ಮೊದಲೇ ಆಗಿದ್ದು. ನನಗೆ ಸುಳ್ಳು ಹೇಳಲು ಬರುವುದಿಲ್ಲ ಎಂದರು.
ಹಾರೋಹಳ್ಳಿ ತಾಲೂಕು ರಚನೆಯೇನೋ ಆಗಿದೆ. ಆದರೆ ಅಭಿವೃದ್ದಿಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ ಎಂದು ಪ್ರಶ್ನೆ ಕೇಳುತ್ತಿದ್ದಂತೆ ಸಚಿವ ಅಶ್ವತ್ಥನಾರಾಯಣ ವೇದಿಕೆಯಿಂದಲೇ ನಿರ್ಗಮಿಸಿದ್ದಾರೆ ಎಂದು ತಿಳಿದುಬಂದಿದೆ.