ಖಗೋಳವೆಂಬುದು ವಿಸ್ಮಯಗಳ ಆಗರ. ಖಗೋಳ ಶಾಸ್ತ್ರಜ್ಞರು ಪ್ರತಿನಿತ್ಯವೂ ಹೊಸ ಹೊಸ ವಿಷಯಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ಅದರಲ್ಲೂ ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳ ಕುರಿತ ವಿಷಯ ತಿಳಿಯಲು ಖಗೋಳ ವಿಜ್ಞಾನಿಗಳು ಸದಾ ತಮ್ಮ ಕಣ್ಣನ್ನು ಆಗಸದತ್ತ ನೆಟ್ಟಿರುತ್ತಾರೆ. ಇಷ್ಟಾದರೂ ಅದನ್ನು ಸಂಪೂರ್ಣವಾಗಿ ಅರಿಯುವುದು ಕಷ್ಟಸಾಧ್ಯವೇ ಸರಿ. ಇದರ ಮಧ್ಯೆ ಖಗೋಳ ಛಾಯಾಗ್ರಾಹಕರೊಬ್ಬರ ಕ್ಯಾಮರಾ ಕಣ್ಣಿನಲ್ಲಿ ಸೂರ್ಯನ ಅತ್ಯಂತ ಸ್ಪಷ್ಟ ಅತ್ಯದ್ಭುತ ಚಿತ್ರ ಸೆರೆಯಾಗಿದ್ದು, ಮನಮೋಹಕವಾಗಿದೆ.
ಖಗೋಳ ಛಾಯಾಗ್ರಾಹಕ ಅಂಡ್ರ್ಯೂ ಮೆಕ್ ಗ್ರಾಥಿ ಅವರ ಕ್ಯಾಮರಾ ಕಣ್ಣಿನಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದು 300 ಮೆಗಾಪಿಕ್ಸೆಲ್ ನೊಂದಿಗೆ ಹಾಲಿ ಲಭ್ಯವಿರುವ ಚಿತ್ರಗಳಿಗಿಂತ 30 ಪಟ್ಟು ದೊಡ್ಡದು ಎನ್ನಲಾಗಿದೆ. ಈ ಸ್ಪಷ್ಟ ಚಿತ್ರದಿಂದಾಗಿ ಸುಳಿ ಸೇರಿದಂತೆ ಸೂರ್ಯನ ಮೇಲ್ಮೈನಲ್ಲಿರುವ ಹಲವು ಲಕ್ಷಣಗಳನ್ನು ಗುರುತಿಸಬಹುದಾಗಿದೆ.
ಛಾಯಾಗ್ರಾಹಕ ಅಂಡ್ರ್ಯೂ @cosmic-background ಎಂಬ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ತಾನು ಸೆರೆ ಹಿಡಿದಿರುವ ಸೂರ್ಯನ ಮನಮೋಹಕ ಚಿತ್ರಗಳನ್ನು ಹಂಚಿಕೊಂಡಿದ್ದು, ಇದನ್ನುಸೆರೆ ಹಿಡಿಯಲು ಸುದೀರ್ಘ ಅವಧಿ ತೆಗೆದುಕೊಂಡಿರುವ ಜೊತೆಗೆ ಸೂರ್ಯನ ತೀಕ್ಷ್ಣ ಬೆಳಕಿನ ಕಾರಣಕ್ಕೆ ಕಣ್ಣು ಕುರುಡಾಗುವ ಸಾಧ್ಯತೆಯೂ ಇತ್ತು. ಆದರೆ ಅತ್ಯಾಧುನಿಕ ಸುಧಾರಿತ ಲೆನ್ಸ್ ಬಳಸಿ ಈ ಅಪರೂಪದ ಚಿತ್ರಗಳನ್ನು ಕ್ಲಿಕ್ಕಿಸಲಾಗಿದೆ.
ಸುಧಾರಿತ ಟೆಲಿಸ್ಕೋಪ್ ಬಳಕೆ ಜೊತೆಗೆ ಇದನ್ನು ಸಾಧಿಸಲಾಯಿತು ಎಂದು ಅಂಡ್ರ್ಯೂ ಹೇಳಿಕೊಂಡಿದ್ದು, ಸೂರ್ಯ ಹಲವು ವಿಸ್ಮಯಗಳ ಆಗರ. ಅದರ ಫೋಟೋ ಸೆರೆ ಹಿಡಿಯಲು ತಾನು ಸದಾ ಉತ್ಸುಕನಾಗಿರುತ್ತೇನೆ ಎಂದಿದ್ದಾರೆ.
ಸೂರ್ಯನು ಸೌರಮಂಡಲದ ಮಧ್ಯದಲ್ಲಿರುವ ನಕ್ಷತ್ರವಾಗಿದ್ದು, 1.39 ಮಿಲಿಯನ್ ಕಿ.ಮೀ. ಸುತ್ತಳತೆಯನ್ನು ಹೊಂದಿದೆ. ಅಲ್ಲದೇ ಸಮೂಹದಲ್ಲಿ ಭೂಮಿಗಿಂತ 330,000 ಪಟ್ಟಿದೆ. ಸೂರ್ಯನ ಶೇ.74 ದ್ರವ್ಯರಾಶಿಯು ಜಲಜನಕದಿಂದ, ಶೇ.25 ಹೀಲಿಯಂನಿಂದ ಮತ್ತು ಉಳಿದ ದ್ರವ್ಯರಾಶಿಯು ಅಲ್ಪ-ಸ್ವಲ್ಪ ಭಾರಿ ವಸ್ತುಗಳಿಂದ ಕೂಡಿದೆ.