ಮೈಸೂರು: ಮೈಸೂರು ಅಭಿವೃದ್ಧಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿ ತಾರಕಕ್ಕೇರಿದ್ದು, ಕಾಂಗ್ರೆಸ್ ಪ್ರತಿಭಟನೆಗೆ ಸಂಸದರು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಅಭಿವೃದ್ಧಿ ಚರ್ಚೆಗೆ ಸಂಸದ ಪ್ರತಾಪ್ ಸಿಂಹ ಪಂಥಾಹ್ವಾನ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ಸಂಸದ ಪ್ರತಾಪ್ ಸಿಂಹ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಗೆ ಕಿಡಿ ಕಾರಿರುವ ಸಂಸದ ಪ್ರತಾಪ್ ಸಿಂಹ, ಕಚೇರಿಗೆ ಬಂದ ಕಾಂಗ್ರೆಸ್ ಮುಖಂಡರನ್ನು ಹಂದಿಗೆ ಹೋಲಿಸಿದ್ದಾರೆ.
ನಾನು ಸಿದ್ದರಾಮಯ್ಯ, ಮಹದೇವಪ್ಪ ಅವರನ್ನು ಕರೆದರೆ ಅವರು ಕಳುಹಿಸಿದ್ದು ಯಾರನ್ನು? ವೀರರು, ಶೂರರು ಯುದ್ಧಕ್ಕೆ ಕುದುರೆ, ಆನೆ ಏರಿ ಬರುತ್ತಾರೆ, ಹಂದಿ ಏರಿ ಕತ್ತೆ ಏರಿ ಯಾರು ಬರುತ್ತಾರೆ? ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ, ಮಹದೇವಪ್ಪ ಅವರು ಕರೆದ ಜಾಗದಲ್ಲಿ, ಹೇಳಿದ ಟೈಂ ಗೆ ನಾನು ಒಬ್ಬನೇ ಬರುತ್ತೇನೆ, ನೀವು ಬೇಕಿದ್ದರೆ ದಂಡು, ದಾಳಿ ಸಮೇತ ಬನ್ನಿ ಎಂದಿದ್ದೆ. ಆದರೆ ಅವರು ಹಂದಿಗಳನ್ನು ಕಳುಹಿಸಿದ್ದಾರೆ. ನೀವು ಹಂದಿ ಕಳುಹಿಸಿದರೆ ನಾವು ಹಂದಿ ಹೊಡೆಯುವವರನ್ನು ಕಳುಹಿಸುತ್ತೇವೆ ಎಂದು ಲೇವಡಿ ಮಾಡಿದ್ದಾರೆ.
ಚರ್ಚೆಗೆ ಕರೆದರೆ ಮಾಜಿ ಸಚಿವರಾದ ಮಹದೇವಪ್ಪ ಯಾಕೆ ಬರ್ತಿಲ್ಲ. ಅವರಿಗೇನು ಕೆಲಸ? ಅಭಿವೃದ್ಧಿ ಮಾಡಿದ್ದರೆ ಆ ಬಗ್ಗೆ ಚರ್ಚಿಸಲು ಹಿಂದೇಟು ಹಾಕುತ್ತಿರುವುದು ಯಾಕೆ? ಸಿದ್ದರಾಮಯ್ಯ, ಮಹದೇವಪ್ಪ ನೇರವಾಗಿ ಬಂದು ಚರ್ಚಿಸಲಿ. ನಾನು ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.