ಬೆಂಗಳೂರು: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಮೊದಲ ಬಜೆಟ್ ನಲ್ಲಿ ಭರ್ಜರಿ ಅನುದಾನ ಘೋಷಿಸಿದ್ದಾರೆ.
ಮೇಕೆದಾಟು ಯೋಜನೆಗೆ 1000 ಕೋಟಿ ಮೀಸಲಿಡಲಾಗುವುದು ಎಂದ ಸಿಎಂ ಬೊಮ್ಮಾಯಿ, ಎತ್ತಿನ ಹೊಳೆ ಯೋಜನೆಗೆ 3000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ 3000 ಕೋಟಿ, ಕಳಸಾಬಂಡೂರಿ ನಾಲ ತಿರುವು ಯೋಜನೆಗೆ 1000 ಕೋಟಿ, ಕೃಷ್ಣ ಮೇಲ್ದಂಡೆ 3ನೇ ಹಂತದ ಯೋಜನೆಗೆ 5000 ಕೋಟಿ ಅನುದಾನ ಘೋಷಿಸಿದ್ದಾರೆ.
ತುಂಗಭದ್ರಾ ಜಲಾಶಯ ನೀರು ಸಂಗ್ರಹಣೆ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1000 ಕೋಟಿ ಅನುದಾನ, ರಾಜ್ಯದ ಕೆರೆಗಳ ಅಭಿವೃದ್ಧಿಗಾಗಿ 500 ಕೋಟಿ ಕ್ರಿಯಾ ಯೋಜನೆ, ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ಕೋಟಿ ರೂಪಾಯಿ. ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್ ಲ್ಯಾಂಡ್ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದರು.
ಕಾಳಿ ನದಿ ನೀರು ಬಳಸಿಕೊಂಡು ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲು ಕ್ರಮ, ಬೆಂಗಳೂರು ವೃಷಭಾವತಿ ನೀರು ಸಂಸ್ಕರಿಸಿದ 308 ದಶಲಕ್ಷ ಲೀಟರ್ ನೀರನ್ನು ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆ ತುಂಬಿಸುವ ಯೋಜನೆಗೆ ಮೊದಲ ಹಂತದಲ್ಲಿ 865 ಕೋಟಿ ರೂ ಅನುದಾನ ಘೋಷಿಸಿದರು.