ಬೆಂಗಳೂರು: ಈಗಾಗಲೇ ದೇಶದಲ್ಲಿ ಪಿ ಎಫ್ ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಪ್ರತ್ಯೇಕ ಆದೇಶ ಹೊರಡಿಸಿ ನಿಷೇಧದ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ ಎಂದು ಡಿಜಿ-ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಸೆ.22ರಂದು ಎನ್ ಐ ಎ ಅಧಿಕಾರಿಗಳು ರಾಜ್ಯದಲ್ಲಿ ದಾಳಿ ನಡೆಸಿ 7 ಜನರನ್ನು ಬಂಧಿಸಿತ್ತು. ರಾಜ್ಯ ಪೊಲೀಸರು ನಡೆಸಿದ ದಾಳಿಯಲ್ಲಿ 15 ಜನರನ್ನು ಬಂಧಿಸಲಾಗಿತ್ತು. ಕೇಂದ್ರ ಸರ್ಕಾರ ನಿನ್ನೆ ರಾತ್ರಿ ಪಿ ಎಫ್ ಐ ಸಂಘಟನೆ ನಿಷೇಧ ಮಾಡಿದೆ. ಅದಕ್ಕೂ ಮುನ್ನ ನಿಷೇಧದ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಪಿ ಎಫ್ ಐ ಸಂಘಟನೆ ನಿಷೇಧಗೊಂಡಿರುವುದರಿಂದ ನಿಷೇಧಿತ ಸಂಘಟನೆ ಪರ ಯಾರೂ ಪ್ರತಿಭಟನೆಗಳನ್ನೂ ಮಾಡುವಂತಿಲ್ಲ. ಪ್ರತಿಭಟನೆ ಕೂಡ ಅಪರಾಧವಾಗಲಿದೆ. ಮುಂಜಾಗೃತಾ ಕ್ರಮವಾಗಿ 101 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತ ಕಾರ್ಯಕರ್ತರನ್ನು ತಹಶೀಲ್ದಾರ್ ಎದುರು ಹಾಜರುಪಡಿಸಿದ್ದೇವೆ ಎಂದರು. ಎಲ್ಲಾ ಪಿ ಎಫ್ ಐ ಸಂಘಟನೆ ಕಚೇರಿ ಬಳಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.
ಪಿ ಎಫ್ ಐ ಜೊತೆಗೆ ಅದರ ಅಂಗಸಂಸ್ಥೆಗಳಾದ ರಿಹಾಬ್ ಇಂಡಿಯಾ ಫೌಂಡೇಷನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರೈಟ್ ಆರ್ಗನೈಜೇಷನ್, ನ್ಯಾಷನಲ್ ಕಾನ್ ಫಡರೇಷನ್ ಆಫ್ ಹ್ಯೂಮರ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫಂಟ್, ಎಂಪವರ್ ಇಂಡಿಯಾ ಫೌಂಡೇಷನ್ ಸಂಘಟನೆಗಳು ನಿಷೇಧಗೊಂಡಿವೆ.