ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಆಗಸ್ಟ್ 26ರಂದು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಇದರ ಮಧ್ಯೆ ರಾಜ್ಯ ಸರ್ಕಾರ ಆಗಸ್ಟ್ 24 ರಿಂದ 27ರವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದೆ.
ಐದಕ್ಕಿಂತ ಹೆಚ್ಚು ಜನರು ನಿಷೇಧಾಜ್ಞೆ ಅವಧಿಯಲ್ಲಿ ಸೇರುವಂತಿಲ್ಲವಾಗಿದ್ದು, ಹೀಗಾಗಿ ಕಾಂಗ್ರೆಸ್ ಮಡಿಕೇರಿ ಚಲೋ ನಡೆಯಲಿದೆಯಾ ಇಲ್ಲವಾ ಎಂಬ ಪ್ರಶ್ನೆ ಈಗ ಮೂಡಿದೆ. ಇದರ ಮಧ್ಯೆ ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಕುರಿತಂತೆ, ಬಿಜೆಪಿ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಸಕ ಅಪ್ಪಚ್ಚು ರಂಜನ್, ಕಾಂಗ್ರೆಸ್ ನವರು ಹೊರಗಿನಿಂದ ಜನ ಕರೆದುಕೊಂಡು ಬರಬೇಕಾಗುತ್ತದೆ. ಆದರೆ ನಮಗೆ ಕೊಡಗಿನಲ್ಲೇ ಬೆಂಬಲವಿದೆ. ಅವರ ಹೋರಾಟವನ್ನು ಎದುರಿಸುವ ಶಕ್ತಿ ಜಿಲ್ಲೆಯ ಜನರಿಗಿದೆ ಎಂದು ಹೇಳಿದ್ದಾರೆ.
ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸುವ ಅಗತ್ಯವಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದು, ಕಾಂಗ್ರೆಸ್ ನವರ ಇಂತಹ ಹೋರಾಟಗಳಿಗೆ ಜಿಲ್ಲೆಯ ಜನತೆ ಮನ್ನಣೆ ನೀಡುವುದಿಲ್ಲ ಎಂದಿದ್ದಾರೆ.