ಶಿವಮೊಗ್ಗ: ಮುಖ್ಯಮಂತ್ರಿ ಹುದ್ದೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪೈಪೋಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಿಕ್ಕೆ ಬರುತ್ತಾ ಎಂಬುದನ್ನು ನೋಡಿ. ಆಮೇಲೆ ಸಿಎಂ ಹುದ್ದೆ ಬಗ್ಗೆ ಮಾತನಾಡಲಿ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಾಯುವವರೆಗೆ ನೀವೇ ಸಿಎಂ ಆಗಿರಿ ಬೇರೆ ಯಾರೂ ಆಗ್ಬೇಡಿ ಅಂತ ಯಾರೂ ಹೇಳಿಲ್ಲ. ಆದರೆ ಜನ ನಿಮ್ಮನ್ನು ಆಯ್ಕೆ ಮಾಡಬೇಕು. ಇನ್ನೂ ನಿಶ್ಚಿತಾರ್ಥ ಆಗಿಲ್ಲ, ಮದುವೆ ಆಗಿಲ್ಲ, ಮಗು ಆಗಿಲ್ಲ ಆದ್ರೆ ಇಬ್ಬರೂ ನಾನೇ ಅಪ್ಪ, ನಾನೇ ಅಪ್ಪ ಎಂದು ಹೇಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.
ಒಕ್ಕಲಿಗರೆಲ್ಲರೂ ನನ್ನ ಜತೆ ನಿಲ್ಲಬೇಕು ಎಂದು ಡಿಕೆಶಿ ಹೇಳಿದ್ದಾರೆ. ಜಾತಿ ಮೇಲೆ ಸಿಎಂ ಆಗಬೇಕು ಎಂದು ಕೇಳುವವರಿಗೆ ನಾಚಿಕೆಯಾಗಬೇಕು. ಸಿದ್ದರಾಮಯ್ಯ ಬಿಡಿ ಅವರು ಜಾತಿವಾದಿ, ಎಷ್ಟು ಬೈದರೂ ಅಷ್ಟೇ. ಅವರಿಗೆ ಮಾನ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.