ಶಿವಮೊಗ್ಗ: ಸ್ವಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಡುವುದಾಗಿ ಘೋಷಿಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರ ತಾಲೂಕಿನಿಂದ ಬಿ.ವೈ. ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಚುನಾವಣಾ ರಾಜಕೀಯದಿಂದಲೇ ಯಡಿಯೂರಪ್ಪ ನಿವೃತ್ತಿ ಹೊಂದಲಿದ್ದಾರಾ ಎಂಬ ಪ್ರಶ್ನೆ ರಾಜ್ಯ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪುತ್ರ ಬಿ.ವೈ. ವಿಜಯೇಂದ್ರ, ನಿವೃತ್ತಿ ಎಂಬುದು ಯಡಿಯೂರಪ್ಪನವರ ಡಿಕ್ಷನರಿಯಲ್ಲಿಯೇ ಇಲ್ಲ. ನಮ್ಮ ತಂದೆ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲ್ಲ. ದೇವರು ಎಲ್ಲಿಯವರೆಗೆ ಶಕ್ತಿ ಕೊಡುತ್ತಾರೋ ಅಲ್ಲಿಯವರೆಗೂ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸುತ್ತಾರೆ ಎಂದರು.
ಹಿಂದೆ ಕೂಡ ಪಕ್ಷ ಸಂಘಟನೆ ಮಾಡಿದ್ದರು, ಮುಂದೆಯೂ ಮಾಡುತ್ತಾರೆ. ಕ್ಷೇತ್ರದ ಜನರ ತೀರ್ಮಾನದಂತೆ ಯಡಿಯೂರಪ್ಪ ನಡೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಕ್ಷೇತ್ರದ ಜನರು ಒತ್ತಡ ಹಾಕುತ್ತಿದರು. ಪಕ್ಷ ಹಾಗೂ ತಂದೆ ತೆಗೆದುಕೊಂಡ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ತಂದೆಯ ಮಾರ್ಗದರ್ಶನ, ವರಿಷ್ಠರ ಮಾತಿನಂತೆ ನಡೆದುಕೊಳ್ಳುತ್ತೇನೆ. ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆ ನನ್ನ ಮೊದಲ ಆದ್ಯತೆ ಎಂದು ಹೇಳಿದರು.
ಶಿಕಾರಿಪುರ ಅಂತ ಅಲ್ಲ ರಾಜ್ಯದ ಯಾವುದೇ ಕ್ಷೇತ್ರ ಕೊಟ್ಟರು ಸ್ಪರ್ಧಿಸಲು ನಾನು ಸಿದ್ಧನಿದ್ದೆ. ಹಳೆ ಮೈಸೂರು ಭಾಗದಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಪಕ್ಷ ಸಂಘಟನೆ ಮಾಡುತ್ತೇನೆ. ತಂದೆಯ ಆಶಯದಂತೆ, ಪಕ್ಷದ ತೀರ್ಮಾನದಂತೆ ನಡೆಯುತ್ತೇನೆ. ತಂದೆಯ ನಡೆಯಲ್ಲಿ ಸ್ಪಷ್ಟತೆ ಇದೆ ಯಾವತ್ತೂ ಗೊಂದಲಗಳಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಯಾವುದೇ ಗೊಂದಲಕ್ಕೆ ಒಳಗಾಗುವರಲ್ಲ ಎಂದು ಹೇಳಿದರು.