ಬೆಂಗಳೂರು: ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ಕಡ್ಡಾಯವಾಗಿದೆ. ನಿಯಮದಲ್ಲಿ ಯಾವುದೇ ರೀತಿ ಬದಲಾವಣೆಗಳು ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ಹಿಜಾಬ್ ವಿಚಾರವಾಗಿ ಪರೀಕ್ಷೆಗೆ ಗೈರಾದರೆ ಮತ್ತೆ ಎಕ್ಸಾಂ ಇರುವುದಿಲ್ಲ, ರಿ ಎಕ್ಸಾಂ ಬರೆಯಲು ಅವಕಾಶವಿಲ್ಲ. ವಿದ್ಯಾರ್ಥಿಗಳು ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಿದರು.
ಶಾಲೆ ತನಕ ಹಿಜಾಬ್ ಹಾಕಬಹುದು. ಆದರೆ ಪರೀಕ್ಷಾ ಕೊಠಡಿ, ಶಾಲೆಯ ಒಳಗೆ ಹಿಜಾಬ್ ಧರಿಸಲು ಅವಕಾಶವಿಲ್ಲ. ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೀಡಾಗದೇ ಖುಷಿ ಖುಷಿಯಾಗಿ ಪರೀಕ್ಷೆ ಬರೆಯಿರಿ. ಪ್ರತಿ ವರ್ಷದಂತೆ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಇನ್ನು ಬಾಹ್ಯ, ರಿಪಿಟರ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ಇಲ್ಲ, ಉಳಿದಂತೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೆ ಪರೀಕ್ಷೆಗೆ ಹಾಜರಾಗಬೇಕು ಎಂದು ತಿಳಿಸಿದರು.