ಬೆಂಗಳೂರು: ಆಡಳಿತದಲ್ಲಿ ಮತಾಂಧ ಶಕ್ತಿಗಳ ಓಲೈಕೆಯನ್ನೇ ಬಂಡವಾಳ ಮಾಡಿಕೊಂಡು ಬಂದಿರುವ ನಿಮ್ಮಿಂದ ನಾವು ಸಂವಿಧಾನದ ಪಾಠ ಕಲಿಯಬೇಕಿಲ್ಲ. ಬದ್ಧತೆ, ಸಿದ್ಧಾಂತದ ವಿಚಾರದಲ್ಲಿ ನಮಗೆ ಸಂಘ ಏನು ಕಲಿಸಿಕೊಡಬೇಕು ಅದನ್ನು ಕಲಿಸಿಕೊಟ್ಟಿದೆ, ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಶಾಸಕ ಕೆ.ಜಿ. ಬೋಪಯ್ಯ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಕಾರ್ಯಕರ್ತರು ಬಂದೂಕು ತೆಗೆದುಕೊಂಡು ಡಿಜೆ ಹಳ್ಳಿ, ಕೆಜಿ ಹಳ್ಳಿ ತರಹ ದಲಿತರ ಮನೆಗೆ ಎಂದಿಗೂ ನುಗ್ಗಿಲ್ಲ. ಗೌರಿಪಾಳ್ಯ, ಮಂಗಳೂರಿನಲ್ಲಿ ಗಲಭೆ, ಹರ್ಷನ ಹತ್ಯೆ ಮಾಡಿದ ಮುಸಲ್ಮಾನರು ನಂತರದಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ದಾಳಿ ಮಾಡಿ ಹತ್ಯೆ ಮಾಡಲು ಯತ್ನಿಸಿದಾಗ ಎಲ್ಲಿ ಹೋಗಿತ್ತು ನಿಮ್ಮ ಬದ್ಧತೆ ? ಕಳೆದವಾರ ಸರ್ಕಾರಿ ಕಛೇರಿಗೆ ನುಗ್ಗಿ ಕಾಶ್ಮೀರಿ ಪಂಡಿತರ ಹತ್ಯೆ ನಡೆದಾಗ ಎಲ್ಲಿ ಹೋಗಿತ್ತು ನಿಮ್ಮ ಬದ್ಧತೆ ? ನಿಮ್ಮಂತೆ ಸ್ಕ್ರೂ ಡ್ರೈವರ್ ಹೋಂ ಮಿನಿಸ್ಟರ್ ಇರುವ ಸರ್ಕಾರ ನಮ್ಮದಲ್ಲ, ನಮ್ಮ ಗೃಹ ಸಚಿವರು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸಮರ್ಥರು ಎಂದು ಸರಣಿ ಟ್ವೀಟ್ ಮೂಲಕ ಗುಡುಗಿದ್ದಾರೆ.
ನಿಮ್ಮಂತಹ ಮತಾಂಧರ ಓಲೈಕೆ ಮಾಡುವ ರಾಜಕಾರಣಿಗಳು ಇರುವವರೆಗೂ ಹಿಂದೂಪರ ಕಾರ್ಯಕರ್ತರು ಆತ್ಮರಕ್ಷಣೆಗಾಗಿ ಶಸ್ತ್ರಾಭ್ಯಾಸ ಮಾಡುವುದು ಅನಿವಾರ್ಯವಾಗಿದೆ. ನಮ್ಮ ಕಾರ್ಯಕರ್ತರು ಶಸ್ತ್ರಾಭ್ಯಾಸ ಕಲಿತು ಎಂದಿಗೂ ಕಾಶ್ಮೀರಿ ಪಂಡಿತರನ್ನು ಗುಂಡಿಟ್ಟು ಕೊಂದಿಲ್ಲ. ಬಡ ರೈತರ ಕೊಟ್ಟಿಗೆಗಳಿಗೆ ನುಗ್ಗಿ ಬೆದರಿಸಿ ಗೋವುಗಳನ್ನು ಕದ್ದಿಲ್ಲ. ತಲವಾರು ಹಾಗೂ ಬಂದೂಕು ಹಿಡಿದು ಬಲವಂತದ ಮತಾಂತರ ಮಾಡಿಲ್ಲ. ಬಂದೂಕು ಹಿಡಿದು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ ಅಥವಾ ಭಯೋತ್ಪಾದಕರಾದ ಉದಾಹರಣೆಯಿಲ್ಲ. ಬಡಮಕ್ಕಳ ಕೈಗೆ ಬಂದೂಕು ನೀಡಿ ಕಾಡಿಗೆ ಕಳಿಸಿ ರಕ್ತ ಹರಿಸಿಲ್ಲ ಎಂದಿದ್ದಾರೆ.
ಬರೇ ಒಂದು ವರ್ಗದ ಕ್ರಿಮಿನಲ್ ಗಳ ಕೇಸ್ ಮುಕ್ತಗೊಳಿಸಿದ ನೀವು ನಮಗೆ ಕಾನೂನಿನ ಪಾಠ ಮಾಡುವ ಅಗತ್ಯವಿಲ್ಲ. ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ದಲಿತ ಮುಖಂಡರ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಬೆಂಕಿ ಹಚ್ಚಿ ದಾಂಧಲೆ ಮಾಡಿದಾಗ ಏನಾಗಿತ್ತು ನಿಮ್ಮ ಬದ್ಧತೆಗೆ ಸಿದ್ದರಾಮಯ್ಯನವರೇ ? ಎಂದು ಪ್ರಶ್ನಿಸಿದ್ದಾರೆ.